
ಹೊನ್ನಾವರ ಮೇ 13 : ಪಾಕಿಸ್ತಾನಕ್ಕೆ ಭಾರತ ರಣವೀಳ್ಯ ಕೊಟ್ಟಾಗಿದೆ ಆದ್ದರಿಂದ ಪಾಕಿಸ್ತಾನಕ್ಕೆ ಕಳಿಸುವುದಾದರೆ ನಾವು ಮುಂಬೈ ಮತ್ತು ಉತ್ತರದ ರಾಜ್ಯಗಳ ಎಲೆ ವ್ಯಾಪಾರಿಗಳಿಗೆ ವೀಳ್ಯದೆಲೆಯನ್ನು ಕೊಡುವುದಿಲ್ಲ ಎಂದು ಹೊಸಾಕುಳಿಯಿಂದ ನಿತ್ಯ ಒಂದು ಮಿನಿ ಲಾರಿ ಲೋಡ್‌ನಷ್ಟು ವೀಳ್ಯದೆಲೆಯನ್ನು ಉತ್ತರದ ರಾಜ್ಯಕ್ಕೆ ಕಳಿಸುತ್ತಿದ್ದ ನಾಲ್ವರು ಪ್ರಮುಖ ವೀಳ್ಯದೆಲೆ ವ್ಯಾಪಾರಿಗಳು ಹೇಳಿದ್ದಾರೆ.

ಹೊನ್ನಾವರದಿಂದ ಬಾಸ್ಕೆಟ್‌ನಲ್ಲಿ ಲಾರಿಯಲ್ಲಿ ರಾಣೆಬೆನ್ನೂರಿಗೆ ಅಲ್ಲಿಂದ ಪ್ರತ್ಯೇಕ ಪ್ಯಾಕಿಂಗ್‌ನಲ್ಲಿ ಭೋಪಾಲಿಗೆ ಟ್ರೇನಿನಲ್ಲಿ ಸಾಗುತ್ತಿದ್ದ ಎಲೆ ಅಲ್ಲಿಂದ ಸೂಟ್ಕೇಸ್ ತುಂಬಿ ವಿಮಾನದಲ್ಲಿ ಅಥವಾ ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ ಪಾಕಿಸ್ತಾನಕ್ಕೆ ಸಾಗಿಸಲ್ಪಡುತ್ತಿತ್ತು. ಸಂಜೋತಾ ನಿಂತ ಮೇಲೆ ಸಂಜೆ ೬ ಗಂಟೆಗೆ ಕೊಂಕಣ ರೈಲ್ವೆಯಲ್ಲಿ ಮುಂಬೈಗೆ ಕಳಿಸಿ ಅಲ್ಲಿಂದ ಪಾಕಿಸ್ತಾನಕ್ಕೆ ಕಳಿಸಲಾಗುತ್ತಿತ್ತು. ಅಧಿಕೃತ ವ್ಯಾಪಾರ ನಿಂತರೂ ಕದ್ದು ಮುಚ್ಚಿ ಪಾಕಿಸ್ತಾನಕ್ಕೆ ಹೊಸಾಕುಳಿಯ ಎಲೆ ಈಗಲೂ ಹೋಗುತ್ತಿದೆ.

1000ಎಲೆಗಳ ಒಂದು ಕಟ್ಟಿಗೆ 50-60ರೂ. ದರ ಇತ್ತು. ಅಂದರೆ ಪ್ರತಿ ಎಲೆಗೆ ೫೦ ಪೈಸೆಗೆ ಇಲ್ಲಿ ಖರೀದಿಯಾಗುತ್ತಿತ್ತು. ಪಾಕಿಸ್ತಾನದ ಗ್ರಾಹಕನಿಗೆ ತಲುಪುವಾಗ ಎಲೆಗೆ 5-10ರೂ. ಬೀಳುತ್ತಿತ್ತು. ಪಾಕಿಸ್ತಾನಕ್ಕ ನೇರ ಹೋಗುವುದು ಕಡಿಮೆ ಆದ ಮೇಲೆ ಎಲೆಯ ದರ ಇಳಿದಿದೆ. ಈಗ ಕಟ್ಟಿಗೆ 20-30 ರೂ. ನಡೆಯುತ್ತಿದೆ. ಆದರೂ ನಾವು ಪಾಕಿಸ್ತಾನಕ್ಕೆ ಭಾರತೀಯ ವ್ಯಾಪಾರಿಗಳು ಈಗಲೂ ಕದ್ದುಮುಚ್ಚಿ ಎಲೆ ಕಳಿಸುವುದಾದರೆ ವ್ಯಾಪಾರ ಬಂದ್ ಮಾಡುತ್ತೇವೆ ಅನ್ನುತ್ತಾರೆ. ಪಾಕಿಸ್ತಾನಕ್ಕೆ ಎಲೆಯನ್ನು ಕಳಿಸುವ ಬದಲು ಬಳ್ಳಿಯನ್ನು ಕಿತ್ತೆಸೆಯುತ್ತೇವೆ ಅನ್ನುತ್ತಾರೆ ರೈತರು.
ತಾಲೂಕಿನಿಂದ ನೇರ ವೀಳ್ಯದೆಲೆಯನ್ನು ಹುಬ್ಬಳ್ಳಿ, ಮುಂಬೈ ಮತ್ತು ಭೋಪಾಲ್ ಏಜಂಟರಿಗೆ ಕಳಿಸುವ ವ್ಯಾಪಾರಿಗಳಾದ ಸತೀಶ ಭಟ್ ಆರೋಳ್ಳಿ, ಗೋವಿಂದ ಭಟ್ ಮುಗ್ವಾ, ಎಸ್.ಐ. ಹೆಗಡೆ ವಿಲಾಯತಿ ಇವರು ಮತ್ತು ಹಲವಾರು ರೈತರನ್ನು ಉದಯವಾಣಿ ಮಾತನಾಡಿಸಿದಾಗ ಒಕ್ಕೊರಲಿನಿಂದ ಮೇಲಿನಂತೆ ಹೇಳಿ ತಮ್ಮ ಬೆಂಬಲ ಮೋದಿ ಸರ್ಕಾರಕ್ಕಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಸ್ವಾತಂತ್ರ್ಯ ಬರುವ ಮುಂಚಿನಿಂದಲೂ ಉತ್ತರ ಭಾರತ ಮತ್ತು ಈಗಿನ ಪಾಕಿಸ್ತಾನ ಪ್ರದೇಶದ ಜನರಿಗೆ ಹೊನ್ನಾವರ ತಾಲೂಕಿನ ಹೊಸಾಕುಳಿ ವೀಳ್ಯದೆಲೆಯ ಮೇಲೆ ತುಂಬ ವ್ಯಾಮೋಹ. ಖಾರವಾಗಿರುವ, ಕಪ್ಪಗಿರುವ ಅಂಗೈಗಿಂತ ಅಗಲವಾಗಿರುವ ಹೊಸಾಕುಳಿ ವೀಳ್ಯದೆಲೆಗೆ ವಿಶೇಷ ರುಚಿಯಿದೆ. ಇದೇ ಎಲೆಯನ್ನು ಬೇರೆಡೆ ಬೆಳೆದರೆ ಈ ರುಚಿ ಬರುವುದಿಲ್ಲ. ತಂಬಾಕು, ಸುಣ್ಣ, ಪಾನ್‌ಮಸಾಲ ಮತ್ತು ಜೋಡಿ ಹೊಸಾಕುಳಿ ಎಲೆಯೊಂದಿಗೆ ವೀಳ್ಯ ಮೆಲ್ಲುವ ಅನುಭವ ಸ್ವರ್ಗ ಸಮಾನ ಎಂಬುದು ಉತ್ತರದವರ ಅಭಿಪ್ರಾಯ. ಕಲ್ಕತ್ತಾ ಪಾನ್‌ನಿಂದ ಆರಂಭಿಸಿ ಮೈಸೂರಿನ ಚಿಗುರೆಲೆಯವರೆಗೆ ಹಲವಾರು ಜಾತಿಯ ವೀಳ್ಯದೆಲೆ ಇದೆ. ಪ್ರತಿಯೊಂದು ಎಲೆ ಮತ್ತು ವಿಶೇಷ ಮಸಾಲೆಯ ಪಾನ್‌ಗೆ ಪ್ರತ್ಯೇಕ ರುಚಿ ಇರುತ್ತದೆ.

ಹೊಸಾಕುಳಿ ವೀಳ್ಯದೆಲೆ ಬಳಸಿ ಮಾಡುವ ಪಾನ್ ಅಭ್ಯಾಸವಾದರೆ ಜನ ಎಷ್ಟು ಬೆಲೆ ತೆತ್ತಾದರೂ ಖರೀದಿಸುತ್ತಾರೆ. ಭಗವಂತನಿಗೆ ಅರ್ಪಿತವಾಗುವ ತಾಂಬೂಲ ಪಟ್ಟಿಯಲ್ಲಿ ಮುಖ್ಯವಾದ ವೀಳ್ಯದೆಲೆ ದೇಶ ಇಬ್ಭಾಗವಾದರೂ ಎರಡೂ ದೇಶದ ಜನರಿಗೆ ಪ್ರೀತಿಯ ಉಪಹಾರ. ದೇಶವನ್ನು ಜೋಡಿಸಿದ್ದ ವೀಳ್ಯದೆಲೆ ವ್ಯವಹಾರ ಪುಲ್ವಾಮಾ ಘಟನೆಯಿಂದ ರಣವೀಳ್ಯ ನೀಡುವಂತಾಗಿದೆ.
