ಹೊನ್ನಾವರ ಮಾ.25 : ಬಿಸಿಲಿನ ತಾಪಕ್ಕೆ ಬಸವಳಿದು ಹೋಗಿದ್ದ ಕರಾವಳಿಯ ಜನತೆಗೆ ಮಳೆರಾಯ ತಂಪೆರದಿದ್ದಾನೆ. ಆದ್ರೆ ಜೋರಾದ ಮಳೆಯ ನಿರೀಕ್ಷೆಯಲ್ಲಿದ್ದ ಹೊನ್ನಾವರ ಪಟ್ಟಣದ ಜನತೆಗೆ ಮಾತ್ರ ಮಳೆರಾಯ ನಿರಾಸೆ ಮೂಡಿಸಿದ್ದಾನೆ. ಕಾತರಿಂದ ಕಾಯುತ್ತಿದ್ದ ಕರವಾಳಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದ್ದರೂ, ಕರವಾಳಿ ಭಾಗದಲ್ಲಿ ಮಳೆಯಾಗಿರಲಿಲ್ಲ. ಆದ್ರಿವತ್ತು ಮಳೆರಾಯನ ಆಗಮನ ಕಾದು ಬಿಸಿಯಾಗಿದ್ದ ಕರಾವಳಿ ಮಣ್ಣಿಗೆ ಮಳೆರಾಯ ತಂಪೆರೆದಿದ್ದಾನೆ…

ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ ಸೇರಿದಂತೆ ಹಲವು ತಾಲೂಕುಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ಕೆಲವೇ ಹೊತ್ತು ಮಳೆ ಬಂದರೂ, ಜೋರಾಗಿ ಬಂದಿದೆ. ಕೆಲವಡೆ ಮಳೆಯೊಂದಿಗೆ ಬೀಸಿದ ಜೋರಾದ ಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವಡೆ ಸಂಚಾರ ಕೂಡ ಅಸ್ತವ್ಯಸ್ಥವಾಗಿದೆ…
ಇನ್ನು ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿ ವರುಣ ಆರ್ಭಟಿಸಿದ್ದಾನೆ. ಗೇರುಸೊಪ್ಪಾ, ಅಳ್ಳಂಕಿ, ಹಡಿನಬಾಳ, ಕೂಡ್ಲ, ಭಾಸ್ಕೇರಿ, ಉಪ್ಪೋಣಿ, ಮಾವಿನಹೊಳೆ, ನಗರಬಸ್ತಿಕೇರಿ, ಹೊಸಾಡ, ಮಾವಿನಕುರ್ವಾ, ಮಂಕಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದ ಗ್ರಾಮೀಣ ಭಾಗದ ಜನತೆ ವರುಣನ ಎಂಟ್ರಿಗೆ ಖುಷಿಪಟ್ಟಿದ್ದಾರೆ…

ಆದ್ರೆ ಹೊನ್ನಾವರ ಪಟ್ಟಣದ ಜನೆತೆಗೆ ಮಳೆರಾಯ ನಿರಾಸೆ ಮೂಡಿಸಿದ್ದಾನೆ. ಭಾರಿ ಮಳೆ ಬರುವ ಮುನ್ಸೂಚನೆಯಾಗಿ ಮೋಡ ಕವಿದಿತ್ತು. ಇದಕ್ಕೆ ಸಾಕ್ಷಿಯಾಗಿ ಗಾಳಿ ಕೂಡ ಜೋರಾಗಿ ಬೀಸಿತ್ತು. ಆದ್ರೆ ಹನಿ ಹನಿ ಜಿನುಗಿ ಮಳೆರಾಯ ತಣ್ಣಗಾದ. ಜೋರಾಗಿ ಮಳೆ ಬಂದು ತಂಪೆರೆಯುತ್ತಾನೆ ಅಂತ ಕಾದಿದ್ದ ಪಟ್ಟಣದ ನಿವಾಸಿಗಳಿಗೆ ಇನ್ನಿಲ್ಲದ ನಿರಾಸೆಯಾಯ್ತು…
ಒಟ್ನಲ್ಲಿ ಯುಗಾದಿ ಹಬ್ಬದ ಬೋನಸ್ ಆಗಿ ಮಳೆ ಬಂದಿದ್ದರಿಂದ ಕಾದಿದ್ದ ಇಳೆಗೆ ತಂಪೆರದಂತಾಗಿದೆ. ಯುಗಾದಿ ಹಬ್ಬದ ಶುಭ ಸಂದೇಶವೆಂಬಂತೆ ವರುಣನ ಎಂಟ್ರಿಯಾಗಿದ್ದು, ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಜನರಿಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ.