ಹೊನ್ನಾವರಕ್ಕೆ ಪ್ರವಾಸಿಗರ ಸಾಗರ, ಅವ್ಯವಸ್ಥೆಯ ಆಗರ.


ಹೊನ್ನಾವರ ಡಿ. 31: ಕ್ರಿಸ್‌ಮಸ್ ರಜೆ, ರವಿವಾರ, ಬ್ಯಾಂಕ್ ರಜೆಗಳು ಒಟ್ಟಾಗಿ ಬಂದಿರುವುದರಿಂದ ಪ್ರವಾಸಿಗರ ಮತ್ತು ರೀಲ್ ತಯಾರಿಸುವವರ ಬಾಯಲ್ಲಿ “ಹೊನ್ನಾವರ ಹೆವನ್” ಎಂಬ ಮಾತುಗಳು ಬರುತ್ತಿರುವುದರಿಂದ 50 ಸಾವಿರದಷ್ಟು ಪ್ರವಾಸಿಗರು ಬೋಟಿಂಗ್‌ಗಾಗಿ ಹೊನ್ನಾವರಕ್ಕೆ ಸಾಗರದಂತೆ ಬಂದು ಸೇರಿದ್ದಾರೆ.

ಕಾಲೇಜು ಸರ್ಕಲ್‌ನಿಂದ ಶರಾವತಿ ಸೇತುವೆ ತುದಿಯವರೆಗೆ 3 ಕಿ.ಮೀ. ಸಂಚಾರ ಪದೇ ಪದೇ ಸ್ಥಗಿತವಾಗುತ್ತದೆ. ತಾಲೂಕಾಡಳಿತದ ಮತ್ತು ರಾಜಕಾರಣಿಗಳ ನಿರ್ಲಕ್ಷದಿಂದ ಪ್ರವಾಸ ಅವ್ಯವಸ್ಥೆಯ ಆಗರವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರವಾಸಿಗರನ್ನು ನಿಯಂತ್ರಿಸುವ ಮತ್ತು ಪ್ರವಾಸಿ ನಿರ್ವಾಹಕರಿಗೆ ಕೆಲಸ ಆಗದಿದ್ದರೆ ಆಗಬಹುದಾದ ಅನಾಹುತಕ್ಕೆ ಜಿಲ್ಲಾಡಳಿತ, ರಾಜಕಾರಣಿಗಳು ಕಾರಣರಾಗುತ್ತಾರೆ.

ಬೋಟಿಂಗ್‌ಗೆ ಹೋಗುವ ಚರ್ಚ್ ರಸ್ತೆ ಕಿರಿದಾಗಿದೆ. ದೊಡ್ಡ ವಾಹನಗಳು ನುಗ್ಗುತ್ತವೆ. ಪದೇ ಪದೇ ಹೆದ್ದಾರಿ ಸಂಚಾರ ಬಂದ್ ಆಗುತ್ತದೆ. ಕ್ಯೂ ಪದ್ದತಿ ಇಲ್ಲದ ಕಾರಣ ಬೋಟ್ ನಿಲ್ಲುವಲ್ಲಿ ಜಗ್ಗಾಟ ನಡೆಯುತ್ತದೆ. ಜೀವರಕ್ಷಕ ಉಪಕರಣ ಬಳಸುವುದಿಲ್ಲ. ಪ್ರವಾಸಿಗರನ್ನು ಮಿತಿಮೀರಿ ತುಂಬುತ್ತಾರೆ. ಏಜಂಟರುಗಳು ವಾಹನ ಬೆನ್ನಟ್ಟಿ ಅಡ್ಡಗಟ್ಟಿ ಪೈಪೋಟಿಯಿಂದ ಕರೆದೊಯ್ಯುತ್ತಾರೆ. ಪದೇ ಪದೇ ಗಲಾಟೆ, ಘರ್ಷಣೆ ನಡೆಯುತ್ತದೆ. ದರ ನಿಶ್ಚಯ ಇಲ್ಲ. ಕಳೆದ ವರ್ಷ ಹೀಗೆ ನಡೆದ ಕಾರಣ ಜಿಲ್ಲಾಧಿಕಾರಿಗಳು ಸಭೆ ಕರೆದು ಹೆದ್ದಾರಿಯಲ್ಲಿ ಕಾರ್ಯಾಲಯ ನಿರ್ಮಿಸಿ ಕ್ಯೂ ಪದ್ದತಿ, ಟೋಕನ್ ಪದ್ಧತಿ, ಪ್ರವಾಸಿಗರ ಮಿತಿ ಇದನ್ನೆಲ್ಲಾ ನಿರ್ಮಿಸಬೇಕು. ದರ ನಿಗದಿ ಪಡಿಸಿ ಬೋರ್ಡ್ ಹಾಕಬೇಕು ಎಂದು ಆದೇಶ ಮಾಡಿದ್ದರು. ಶರಾವತಿಯ ಎಡದಂಡೆಯಲ್ಲೂ ಬೋಟಿಂಗ್, ಕಾಂಡ್ಲಾವನ, ಇಕೋ ಬೀಚ್ ಇದ್ದು ಅಲ್ಲೂ ಇದೇ ರೀತಿ ಅಯೋಮಯ. ಈ ದಟ್ಟಣೆ ತಪ್ಪಿಸಲು ಹೊನ್ನಾವರ ಬಂದರದ ವಿಶಾಲ ಜಾಗದಲ್ಲಿ ಇನ್ನೊಂದು ಕೇಂದ್ರ ಮಾಡಲು ಸಲಹೆ ನೀಡಲಾಯಿತು

ಶಿಸ್ತು ತರಲು ಪೊಲೀಸರು ಪ್ರಯತ್ನಿಸಿದರೆ ರಾಜಕಾರಣಿಗಳ ಬೆಂಬಲಿಗರು ಲೆಕ್ಕಿಸುವುದಿಲ್ಲ. ಪ್ರವಾಸೋದ್ಯಮ ಇಲಾಖೆ ಕೆಲಸ ಮಾಡುತ್ತಿಲ್ಲ. ಸ್ಥಳಿಯ ತಹಶೀಲ್ದಾರ ಆಸಕ್ತಿ ವಹಿಸುತ್ತಿಲ್ಲ. ಬಿಜೆಪಿ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ್ ನಾಯ್ಕ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ರಾಜಕೀಯ ಹಸ್ತಕ್ಷೇಪ ಬೇಡ, ಶಿಸ್ತು ತರಬೇಕು ಎಂದು ಹೇಳಿದ್ದಾರೆ, ಕೇಳುವವರಿಲ್ಲ. ಈ ಅಪಾಯಕಾರಿ ಪರಿಸ್ಥಿತಿಯ ಕುರಿತು ಶಾಸಕ ದಿನಕರ ಶೆಟ್ಟಿಯವರ ಗಮನಕ್ಕೆ ಇದನ್ನು ತಂದಾಗ ನನ್ನ ಪಕ್ಷ ಅಧಿಕಾರದಲ್ಲಿಲ್ಲ, ಕಾಂಗ್ರೆಸ್ ಮಂತ್ರಿಗಳು ಇನ್ನೊಬ್ಬರ ಮಾತಿಗೆ ಬೆಲೆ ಕೊಡುವುದಿಲ್ಲ. ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತಾರೆ, ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡುವುದಿಲ್ಲ ಅನ್ನುತ್ತಾರೆ. ಪ್ರವಾಸಿ ಅದ್ವಾನದಿಂದ ಊರವರಿಗೆ ಇದರಿಂದ ಮುಜುಗರವಾಗುತ್ತಿದೆ. ಎಲ್ಲರಿಗೂ ಅನುಕೂಲವಾಗುವ ಪ್ರವಾಸಿಗರು ಸುಖವಾಗಿ ಬಂದು ಹೋಗುವಂತೆ ಸರ್ಕಾರ ಮಾಡದಿದ್ದರೆ ತೊಂದರೆಗಳಿಗೆ ಅವರೇ ಜವಾಬ್ದಾರರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.