ಮೈದಾನದಲ್ಲಿ ಪತ್ತೆಯಾದ ಸತ್ತ ಪ್ರಾಣಿಯ ಅವಶೇಷ ಗೋವಿನದ್ದಲ್ಲ, ಕಾಡು ಹಂದಿಯದ್ದು.! ತನಿಖೆ ನಡೆಸಲಿದೆಯೇ ಅರಣ್ಯ ಇಲಾಖೆ.?

ಕಾರವಾರ: ಮಲ್ಲಾಪುರದ ಮೈದಾನದಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ಪ್ರಾಣಿಯ ದೇಹದ ಅವಶೇಷಗಳು ಕಾಡು ಹಂದಿಯದ್ದಾಗಿದ್ದು, ಗೋವಿನದಲ್ಲ ಎಂದು ಪೊಲೀಸ್ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ವಿನಾಕಾರಣ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಕಳೆದ ಆ.15 ರಂದು ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂವಾಡಾದಲ್ಲಿನ ಶ್ರೀ ಕಾಳಿಕಾ ದೇವಿ ಆಟದ ಮೈದಾನದಲ್ಲಿ ಸತ್ತ ಪ್ರಾಣಿಯ ಅವಶೇಷ ಕಂಡು ಬಂದಿತ್ತು. ಇದನ್ನು ನೋಡಿದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಯಾರೋ ಮಾಂಸಕ್ಕಾಗಿ ಗೋ ಹತ್ಯೆ ಮಾಡಿ ಅವಶೇಷಗಳನ್ನು ಮೈದಾನದಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಜೊತೆಗೆ ಸ್ಥಳೀಯ ಮುಖಂಡ ಚಂದ್ರಶೇಖರ ಬಾಂದೇಕರ ನೇತೃತ್ವದಲ್ಲಿ ಗ್ರಾಮಸ್ಥರು ಆ.16 ರಂದು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಗೋಹತ್ಯೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಈ ಬಗ್ಗೆ ಕಾರ್ಯ ಪ್ರವೃತ್ತರಾದ ಪೊಲೀಸರು ತನಿಖೆ ಆರಂಭಿಸಿದ್ದರು. ಅಲ್ಲದೇ ಸ್ಥಳದಲ್ಲಿ ಪತ್ತೆಯಾದ ಗೋವಿನದ್ದು ಎಂದು ಹೇಳಲಾದ ಸತ್ತ ಪ್ರಾಣಿಯ ಅವಶೇಷಗಳನ್ನು ಸಂಗ್ರಹಿಸಿದ್ದರು. ಬಳಿಕ ಅವಶೇಷಗಳ ಬಗ್ಗೆ ಪರೀಕ್ಷೆ ನಡೆಸುವಂತೆ ಕಾರವಾರದ ಪಶು ಆಸ್ಪತ್ರೆಗೆ ಪತ್ರ ಬರೆದಿದ್ದರು. ಅದರಂತೆ ಪಶುವೈದ್ಯರು ಮಲ್ಲಾಪುರಕ್ಕೆ ತೆರಳಿ ಪ್ರಾಣಿಯ ಅವಶೇಷವನ್ನು ಪರಿಶೀಲಿಸಿ ಇದು ಕಾಡು ಹಂದಿಯ ಅವಶೇಷಗಳಾಗಿವೆ ಎಂದು ವರದಿ ನೀಡಿದ್ದರು.

ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಸೋಮವಾರ ಮಾಹಿತಿ ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೇ ಶಾಂತಿ ಕಾಪಾಡುವಂತೆ ಕೋರಿದ್ದಾರೆ.

ಪ್ರಕರಣಕ್ಕೆ ಟ್ವಿಸ್ಟ್: ಅರಣ್ಯ ಇಲಾಖೆ ತನಿಖೆ ಕೈಗೊಳ್ಳಲಿದೆಯೇ?

ಆಟದ ಮೈದಾನದಲ್ಲಿ ಪತ್ತೆಯಾದ ಸತ್ತ ಪ್ರಾಣಿಯ ಅವಶೇಷಗಳು ಗೋವಿನದಲ್ಲ ಬದಲಿಗೆ ಕಾಡು ಹಂದಿಯದ್ದು ಎಂದು ದೃಢಪಟ್ಟಿರುವುದರಿಂದ ಇದೀಗ ಮಾಂಸಕ್ಕಾಗಿ ಕಾಡು ಹಂದಿಯ ಬೇಟೆ ನಡೆದಿರುವುದು ದೃಢಪಟ್ಟಂತಾಗಿದೆ. ಯಾರೋ ಆರೋಪಿಗಳು ಕಾಡು ಹಂದಿಯನ್ನು ಬೇಟೆಯಾಡಿ ಮಾಂಸವನ್ನು ತೆಗೆದುಕೊಂಡು ಉಳಿದ ತಲೆ ಹಾಗೂ ಇತರ ಅವಶೇಷವನ್ನು ಮೈದಾನದಲ್ಲಿ ಎಸೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಯಾವುದೇ ವನ್ಯಜೀವಿಯನ್ನು ಕೊಲ್ಲುವುದು ಅಪರಾಧವಾಗಿದ್ದು ಈ ಬಗ್ಗೆ ಮುಂದೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಕಾರ್ಯ ಮಾಡಲಿದ್ದಾರೆಯೇ ಎಂದು ಕಾದು ನೋಡಬೇಕು.