ನವದೆಹಲಿ: 17 ವರ್ಷದ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ ಸೋಮವಾರ ಬೆಳಿಗ್ಗೆ ಮಿಯಾಮಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಕೊನೆಯ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಸೋಲಿಸಿ ಮತ್ತೊಮ್ಮೆ ಹೊಸ ದಾಖಲೆ ಬರೆದಿದ್ದಾನೆ.
ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ನಾರ್ವೆಯ ಶ್ರೇಷ್ಠ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಸತತ ಮೂರನೇ ಗೆಲುವು ಸಾಧಿಸಿದ್ದಾನೆ. ಪ್ರಜ್ಞಾನಂದ ಮೊದಲು 2 ಬಾರಿ ವಿಶ್ವ ಚೆಸ್ ಛಾಂಪಿಯನ್ ಕಾರ್ಲ್‌ಸೆನ್ ಸೋಲಿಸಿದ್ದ.
ಫೆಬ್ರವರಿಯಲ್ಲಿ ಆನ್‌ಲೈನ್ ಚೆಸ್ ಪಂದ್ಯದಲ್ಲಿ ಕಾರ್ಲ್‌ಸನ್ ಮಣಿಸಿದ್ದ. ಆಗಿನ್ನೂ ಪ್ರಜ್ಞಾನಂದನಿಗೆ ಕೇವಲ 16 ವರ್ಷ. ಈ ವರ್ಷ ಮೇ ತಿಂಗಳ ಆನ್‌ಲೈನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಕಾರ್ಲ್‌ಸೆನ್ ಸೋಲಿಸಿದ್ದ. ಪ್ರಸ್ತುತ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಕೊನೆಯ ಸುತ್ತಿನಲ್ಲಿ ಮತ್ತೊಮ್ಮೆ ಕಾರ್ಲ್‌ಸನ್ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾನೆ.
ಕಾರ್ಲ್‌ಸೆನ್ ಹಿಂದಿನ ಆಟಗಳ ಆಧಾರದ ಮೇಲೆ ಹೆಚ್ಚಿನ ಸ್ಕೋರ್ ಹೊಂದಿದ್ದರು. ಆದ್ದರಿಂದ ಪಂದ್ಯವನ್ನು ಗೆದ್ದರೂ ಚಾಂಪಿಯನ್‌ಶಿಪ್‌ನಲ್ಲಿ ಪ್ರಜ್ಞಾನಂದ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.