ಕುಮಟಾ: ಕೆ.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ನೀಡುವ ಪರಿಹಾರ ಹಾಗೂ ಸಹಾಯಧನದ ಚೆಕ್‌ಗಳನ್ನು ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಪಟ್ಟಣದ ಕೆ.ಡಿ.ಸಿ.ಸಿ ಬ್ಯಾಂಕ್ ಸಭಾಭವನದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಮುಕುಂದ ಹಳ್ಕಾರ 5 ಸಾವಿರ, ಗಣೇಶ ಅಂಬಿಗ 3 ಸಾವಿರ, ಸಾವಿತ್ರಿ ಅಂಬಿಗ ೫ ಸಾವಿರ, ಶ್ರೀಧರ ನಾಯ್ಕ 5 ಸಾವಿರ, ಕಾವ್ಯಾ ಮರಾಠಿ 5 ಸಾವಿರ, ಬೀರ ಗೌಡ 5 ಸಾವಿರ, ಶಶಾಂಕ ಅಂಬಿಗ 10 ಸಾವಿರ, ಇಂದಿರಾ ಗಾವಡಿ 5 ಸಾವಿರ, ಗಿಬ್ ಪ್ರೌಢಶಾಲೆಯ ಮುಖ್ಯಾಧ್ಯಾಪಕರಿಗೆ 10 ಸಾವಿರ, ಪಾರ್ವತಿ ನಾಯ್ಕ 5 ಸಾವಿರ ಒಟ್ಟೂ 58 ಸಾವಿರ ರೂ. ಚೆಕ್‌ಗಳನ್ನು ಹಸ್ತಾಂತರಿಸಿದರು.
ನಂತರ ಗಜಾನನ ಪೈ ಮಾತನಾಡಿ, ಅನಾರೋಗ್ಯ ಪೀಡಿತರಿಗೆ, ಶಿಕ್ಷಣಕ್ಕೆ, ರೈತರಿಗೆ, ಕ್ರೀಡಾಕೂಟಗಳಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೆ.ಡಿ.ಸಿ.ಸಿ ಬ್ಯಾಂಕ್ ನಿಂದ ಸಾಕಷ್ಟು ಚೆಕ್‌ಗಳನ್ನು ನೀಡಲಾಗಿದೆ. ರೈತರ ಕಲ್ಯಾಣ ನಿಧಿಯ ಮೂಲಕ ಹಲವಾರು ಯೋಜನೆಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಾರ್ಮಿಕ ಸಚಿವ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸಾಕಷ್ಟು ಫಲಾನುಭವಿಗಳಿಗೆ ಸಹಾಯ ಮಾಡಲಾಗಿದೆ. ನವೀಕೃತ ಕಟ್ಟಡ ನಿರ್ಮಾಣಕ್ಕೆ 2.4 ಕೋಟಿ ರೂ. ಹಣ ಮಂಜೂರಾಗಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ. ಒಂದು ವರ್ಷದೊಳಗಡೆ ಕಟ್ಟಡ ನಿರ್ಮಾಣವಾಗಬೇಕೆಂದು ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಕಷ್ಟದಲ್ಲಿರುವ 2 ಸೇವಾ ಸಹಕಾರಿ ಸಂಘಕ್ಕೆ 50 ಸಾವಿರ ಆರ್ಥಿಕ ಸಹಾಯಧನ ನೀಡಲಾಗಿದೆ. 5 ಸೇವಾ ಸಹಕಾರಿ ಸಂಘಕ್ಕೆ ತಲಾ 20 ಸಾವಿರ ಆರ್ಥಿಕ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ, ಅಳಕೋಡ ಗ್ರಾಮ ಪಂಚಾಯ್ತಿ ಸದಸ್ಯರಾದ ವಿನಾಯಕ ನಾಯ್ಕ, ವಿಷ್ಣು ಗೌಡ, ಶಾಖಾ ಸಲಹಾ ಸಮಿತಿ ಸದಸ್ಯರಾದ ಶ್ರೀಪಾದ ಭಟ್ಟ, ಸುರೇಶ ಪ್ರಭು, ಪ್ರಮುಖರಾದ ವಿನಾಯಕ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.