ಹುಲಿಮನೆ ಜಯರಾಮಣ್ಣನ ಚೊಚ್ಚಲ ಕೃತಿಗೆ ಪ್ರಶಸ್ತಿ

ಸಿದ್ದಾಪುರ: ತಾಲೂಕಿನ ಹುಲಿಮನೆಯ‌ ಮೂಲದ ಮಿಜಾರಿನ ನಿವಾಸಿ ಜಯರಾಮ ಹೆಗಡೆ ಅವರ ಚೊಚ್ಚಲ ಕೃತಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಕನ್ನಡ ಸಂಘದ ಪ್ರಸಿದ್ಧ ವಾರ್ಷಿಕ ಗೌರವ ಶಸ್ತಿ ಪ್ರಕಟವಾಗಿದೆ.
ರಂಗಭೂಮಿಯ ಭೀಷ್ಮ, ಟಿಪ್ಪೂ ನಾಟಕದ ಮೂಲಕವೇ ರಂಗಭೂಮಿಯ ಇತಿಹಾಸ ಸೃಷ್ಟಿಸಿದ್ದ ಜಯರಾಮ ಹೆಗಡೆ ಅವರ ಚಿಕ್ಕಪ್ಪ ಹುಲಿಮನೆ ಸೀತಾರಾಮ ಶಾಸ್ತ್ರಿಗಳಿಂದ ಪ್ರಭಾವಿತರಾಗಿದ್ದ ಇವರು . ಜಯರಾಮ‌ ಹೆಗಡೆ ಅವರು ಮೂಡಬಿದಿರೆಯ ಆಳ್ವಾ‌ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿ ಸೇವಾ ನಿವೃತ್ತರಾದವರು. ಮಿಜಾರಿನಲ್ಲಿ ಪತ್ನಿ ಜೊತೆ ವಾಸವಿದ್ದು, ವೈದ್ಯಕೀಯ ದಂಪತಿಗಳಾದ ಮಗ ಲಕ್ಷ್ಮೀಶ ಹಾಗೂ ಸೊಸೆ ಸಮೀಕ್ಷಾ ಜೊತೆ‌ ಸಂಸಾರ ನಡೆಸುತ್ತಿದ್ದಾರೆ.

ನಿತ್ಯ ಬದುಕಿನ ಘಟನೆಗಳನ್ನು ಅಕ್ಷರದಲ್ಲೀಯೂ ದಾಖಲಿಸುತ್ತಿದ್ದ ಇವರು, ತಮ್ಮ ಬದುಕಿನ ವಿವಿಧ ಮಗ್ಗಲುಗಳನ್ನು ಕೃತಿಗಳ‌ ಮೂಲಕವೂ ದಾಖಲಿಸಿ ಈಚೆಗಷ್ಟೇ ಬಿಡುಗಡೆಗೊಳಿಸಿದ ‘ಬೀದಿಯ ಬದುಕು’ ಕೃತಿಯಲ್ಲಿನ ವಿಶಿಷ್ಟ ದಾಖಲೆ ಹಾಗೂ ನಿರೂಪಣೆಗಾಗಿ ಈ ಪ್ರಶಸ್ತಿ ಲಭಿಸಿದೆ.


ಪ್ರಶಸ್ತಿಯು ಐದು ಸಾವಿರ ರೂ. ನಗದು ಹಾಗೂ ತಾಮ್ರ‌ಪ್ರಶಸ್ತಿ ಒಳಗೊಂಡಿದೆ. ಡಿಸೆಂಬರ್ 28ರಂದು ಕಾಂತಾವರದಲ್ಲಿ ನಡೆಯುವ ಕನ್ನಡ‌ ಸಂಘದ ಸುವರ್ಣ ಸಂಭ್ರಮದ ದ್ವಿತೀಯ ಸಮಾವೇಶದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ‌ಪ್ರಕಟನೆ ತಿಳಿಸಿದೆ.