ಮತ್ತೆ ಕಾಡಲಿರುವ ಮಂಗನಕಾಯಿಲೆ, ಮುಗಿಯದ ಎಂಡೋಸಲ್ಫಾನ್ ವ್ಯಥೆ


ಹೊನ್ನಾವರ ನ. ೧೯: ಮಂಗನಕಾಯಿಲೆ ಉಕ ಜಿಲ್ಲೆ ಮತ್ತು ಶಿವಮೊಗ್ಗಾ ಭಾಗವನ್ನು, ಎಂಡೋಸಲ್ಫಾನ್ ದಕ, ಉಕವನ್ನು ಕಾಡತೊಡಗಿ ಹಲವು ದಶಕಗಳು ಕಳೆದವು. ದಕದವರು ಮಂಗನಕಾಯಿಲೆಯನ್ನು ನಿವಾರಿಸಿಕೊಂಡರು, 8 ಸಾವಿರ ಎಂಡೋಸಲ್ಫಾನ್ ಪೀಡಿತರಿಗೆ ನ್ಯಾಯ ಕೊಡಿಸಿದರು. ಶಿವಮೊಗ್ಗಾ ಮತ್ತು ನಮ್ಮವರು ಮಂಗನಕಾಯಿಲೆ ಪರಿಹಾರ ಕಂಡುಕೊಂಡಿಲ್ಲ. ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರ ಸ್ಥಿತಿ ಚಿಂತಾಜನಕವಾಗಿದೆ. ಉಕ ಜಿಲ್ಲೆಯ ಈ ಎರಡೂ ವಿಭಾಗಗಳಿಗೆ ಹೆಚ್ಚು ವೈದ್ಯರಿಲ್ಲ. ಹೊನ್ನಾವರದಲ್ಲಿರುವ ಜಿಲ್ಲಾ ಕೇಂದ್ರಕ್ಕೆ ಸಿಬ್ಬಂದಿಗಳಿಲ್ಲ, ಉಪಕರಣ ಕಟ್ಟಡಗಳಿಲ್ಲ, ವಾಹನವಿಲ್ಲ, ಲಸಿಕೆ ಇಲ್ಲ, ಆದರೆ ಮಂಗನಕಾಯಿಲೆ ಬರುವ ದಿನಗಳು ಸಮೀಪಿಸಿದ ಕಾರಣ ಅದೇ ರಾಗ, ಅದೇ ಹಾಡು ಹಾಡಬೇಕಾಗಿದೆ. ಜನರ ಪಾಡು ಅದೇ ಆಗಿದೆ. ಜಿಲ್ಲೆಯಲ್ಲಿ 9 ಸಾವಿರ ಎಂಡೋಸಲ್ಫಾನ್ ಪೀಡಿತರಿದ್ದಾರೆ. ಇನ್ನೂ 30 ವರ್ಷಗಳ ಕಾಲ ವಂಶವಾಹಿನಿಯಲ್ಲಿ ಎಂಡೋಸಲ್ಫಾನ್ ಪರಿಣಾಮವಾಗಿ ಅಂಗವಿಕಲ ಮಕ್ಕಳು ಹುಟ್ಟಲಿದ್ದಾರೆ ಎಂಬ ಸಂಗತಿ ಎದೆ ನಡುಗಿಸುತ್ತದೆ. ಈಗಲೇ ಎಂಡೋಸಲ್ಫಾನ್ ಸಿಂಪಡಿಸಿದ ಪ್ರದೇಶದಲ್ಲಿ ಕೇರಿಗೆ ನಾಲ್ಕಾರು ಜನ ಎಂಡೋಸಲ್ಫಾನ್ ಪೀಡಿತರಿದ್ದಾರೆ.

2 ದಶಕ ಕಳೆದರೂ ಸರ್ಕಾರದಿಂದ ಕೇವಲ 2400 ಜನರಿಗೆ ಪರಿಹಾರ ಕೊಡಿಸಲು ಸಾಧ್ಯವಾಗಿದೆ. ಮೂವರು ಶಾಸಕರ ಮತ್ತು ಮಂತ್ರಿಗಳ ಮತಕ್ಷೇತ್ರದಲ್ಲಿ ಎಂಡೋಸಲ್ಫಾನ್ ಪೀಡಿತರಿದ್ದಾರೆ. ಆರೋಗ್ಯ ಮಂತ್ರಿಗಳು ಬಂದು ಹೋದರು, ಯಾವ ಪ್ರಯೋಜನವಾಗಿಲ್ಲ. 2026 ರಲ್ಲಿ ಲಸಿಕೆ ಬರುತ್ತದೆ ಎಂದು ಹೇಳಿದ್ದರು. 3 ತಿಂಗಳು ಮೊದಲು ಲಸಿಕೆ ಕೊಡಬೇಕು, ಇನ್ನೂ ಪತ್ತೆಯಿಲ್ಲ. ಮಂಕಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ನಿರ್ಮಾಣಬೇಕಾದ ಎಂಡೋಸಲ್ಫಾನ್ ಪೀಡಿತರ ಆಸ್ಪತ್ರೆ ಆಗಿಲ್ಲ. ಶಿವಮೊಗ್ಗಾದಲ್ಲಿ, ಉತ್ತರಕನ್ನಡದಲ್ಲಿ ಬಿಜೆಪಿ ಸಂಸದರಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಕಾಯಿಲೆಗೆ ಶಾಶ್ವತ ಪರಿಹಾರ ಕೊಡಿಸುವ ಲಸಿಕೆ ಅಥವಾ ಔಷಧವನ್ನು ತಯಾರಿಸುವಂತೆ ಮಾಡಬೇಕಿತ್ತು. ರಾಜ್ಯ ಸರ್ಕಾರ ಮಂಗನಕಾಯಿಲೆ ಪೀಡಿತರಿಗೆ ಮಣಿಪಾಲದಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಿದೆ. 2025ರ ಜನವರಿ 1 ರಿಂದ ನವೆಂಬರ್ 16 ರವರೆಗೆ 39 ಮಂಗಗಳು ಸತ್ತಿವೆ. 660 ರಕ್ತದ ಸ್ಯಾಂಪಲ್ ಪಡೆಯಲಾಗಿದೆ. 10 ಪಾಸಿಟಿವ್ ಬಂದಿದೆ, 3 ಜನರ ಸಾವು ಸಂಭವಿಸಿದೆ. ಮಂಗನಕಾಯಿಲೆಯಿಂದ ಆರಂಭವಾಗಿ ಮೆದುಳುಜ್ವರವಾಗಿ ನಿಗೂಢ ವೈರಸ್‌ನಿಂದ ಬಾಲಕ ಒಬ್ಬ ಮೃತಪಟ್ಟಿದ್ದಾನೆ. 64,500 ಉಣ್ಣಿ ನಿರೋಧಕ ತೈಲ ಬಾಟಲಿಗಳನ್ನು ಹಂಚಲಾಗಿದೆ. 35 ಸಾವಿರ ಸ್ಟೋಕ್ ಇದೆ. 9 ಸಾವಿರ ಕರಪತ್ರ ಹಂಚಲಾಗಿದೆ. ಖಚಿತವಾದ ಲಸಿಕೆ ಅಥವಾ ಔಷಧವನ್ನು ಕೇಂದ್ರ ರಾಜ್ಯ ಸರ್ಕಾರಗಳು ಪೂರೈಸುವವರೆಗೆ ಇನ್ನೆಷ್ಟು ಕಾಲ ಬೇಕು, ಬಲಿಯಾಗಬೇಕು ಗೊತ್ತಿಲ್ಲ.