ಬೆಂಗಳೂರು : ಬಿಬಿಎಂಪಿಗೆ ‘ಗುಡ್‌ಬೈ’ ಹೇಳಿ ಗ್ರೇಟರ್ ಬೆಂಗಳೂರು ಅಥಾರಿಟಿಯನ್ನು ಜಾರಿಗೆ ತಂದ ಸರ್ಕಾರ ಇದೀಗ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ, ಸರ್ಕಾರ ಈ ಹಿಂದೆ ಇದ್ದ 368 ವಾರ್ಡ್‌ಗಳನ್ನು 369ಕ್ಕೆ ಹೆಚ್ಚಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.

ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಹೊಸ ವಾರ್ಡ್ ಸೇರಿಸಲಾಗಿದ್ದು, ಒಟ್ಟು ವಾರ್ಡ್‌ಗಳ ಸಂಖ್ಯೆ 369ಕ್ಕೆ ನಿಗದಿಪಡಿಸಲಾಗಿದೆ. ವಾರ್ಡ್ ಮೀಸಲಾತಿ ಪಟ್ಟಿಗೆ ಸಂಬಂಧಿಸಿ ಅಕ್ಟೋಬರ್ 15ರೊಳಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದ ಜಿಬಿಎ, ಈಗ 369 ವಾರ್ಡ್‌ಗಳ ವಿಂಗಡಣೆಯೊಂದಿಗೆ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ – 72 ವಾರ್ಡ್
ಬೆಂಗಳೂರು ಉತ್ತರ ನಗರ ಪಾಲಿಕೆ – 72 ವಾರ್ಡ್
ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 112 ವಾರ್ಡ್
ಬೆಂಗಳೂರು ಪೂರ್ವ ನಗರ ಪಾಲಿಕೆ – 50 ವಾರ್ಡ್
ಬೆಂಗಳೂರು ಕೇಂದ್ರ ನಗರ ಪಾಲಿಕೆ – 63 ವಾರ್ಡ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಸೆಪ್ಟೆಂಬರ್ 2ರಂದು ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು. ಆಯೋಗದ ವರದಿಯ ಆಧಾರದ ಮೇಲೆ ನಗರಾಭಿವೃದ್ಧಿ ಇಲಾಖೆ ಸೆಪ್ಟೆಂಬರ್ 30ರಂದು ಐದು ನಗರ ಪಾಲಿಕೆಗಳ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆಯನ್ನು ಹೊರಡಿಸಿ, ಆಕ್ಷೇಪಣೆಗಳಿಗೆ 15 ದಿನಗಳ ಕಾಲಾವಕಾಶ ನೀಡಿತ್ತು.
ಈ ಎಲ್ಲ ಪ್ರಕ್ರಿಯೆಗಳ ನಂತರ ಅಂತಿಮ ಪಟ್ಟಿ ಈಗ ಬಿಡುಗಡೆಯಾಗಿದ್ದು, ಜಿಬಿಎ ಚುನಾವಣೆಗೆ ಈ ವಾರ್ಡ್ ವಿಂಗಡಣೆ ಯಾವ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ.
