ನೀನಾಸಂ ನಾಟಕ -ಸಾಧಕರ ಸನ್ಮಾನ

ಹೊನ್ನಾವರ ನ. ೧೯: ಕಾಸರಕೋಡಿನ ಮಾತೃಛಾಯಾ ಟ್ರಸ್ಟ್ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ೨ ದಿನ ನೀನಾಸಂ ತಿರುಗಾಟದ ನಾಟಕ ಪ್ರದರ್ಶನವನ್ನು ಉಚಿತವಾಗಿ ಏರ್ಪಡಿಸಿತ್ತು. ಕಾರ್ಯಕ್ರಮದ ಅಂಗವಾಗಿ ರಂಗಸಾಧಕ, ಲೇಖಕ ಕಿರಣ್ ಭಟ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕಿರಣ್ ಭಟ್ ನೀಡಿದ ಕೊಡುಗೆಗಳನ್ನು ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಸ್ಮರಿಸಿ ಅಭಿನಂದಿಸಿದರು.

ಹಣಕಾಸು ಉದ್ಯಮಿ ಜಿ.ಜಿ. ಶಂಕರ, ಹೊಟೆಲ್ ಉದ್ಯಮಿ ರಾಜು ನಾಯ್ಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಎರಡನೇಯ ದಿನ ನಾಟಕದ ಆರಂಭದಲ್ಲಿ ನಗರದ ಮಂಗಳಮುಖಿ ಆಯಿಷಾ ಮತ್ತು ಅವರ ಬಳಗವನ್ನು ಸನ್ಮಾನಿಸಲಾಯಿತು. ಇವರು ತಾವು ಕಷ್ಟದಲ್ಲಿದ್ದರೂ ಆಸ್ಪತ್ರೆಯ ಚಿಕಿತ್ಸೆಗಾಗಿ ಪರದಾಡುತ್ತಿದ್ದ ಬಡ ಬಾಲಕನೊಬ್ಬನ ಜೀವ ಉಳಿಸಲು ಹೊನ್ನಾವರ-ಕುಮಟಾ-ಅಂಕೋಲಾಗಳಲ್ಲಿ ಓಡಾಡಿ ೬೦ ಸಾವಿರ ರೂ.ಗಳನ್ನು ಸಂಗ್ರಹಿಸಿ ಕೊಟ್ಟ ಮಂಗಳಮುಖಿಯರ ಮಾನವೀಯ ಗುಣವನ್ನು ಮೆಚ್ಚಿ ಮಾತೃಛಾಯಾ ಟ್ರಸ್ಟ್ ಅವರನ್ನು ಸನ್ಮಾನಿಸಿತು. ಅವರ ಪರವಾಗಿ ಸಂಧ್ಯಾ ಮಾತನಾಡಿ ಮಂಗಳಮುಖಿಯರು ತಮ್ಮ ತಪ್ಪಿಲ್ಲದೇ ನಿಮಗಿಂತ ಭಿನ್ನರಾಗಿ ಜನಿಸಿದ್ದಾರೆ.

ಆದರೆ ಎಲ್ಲರಂತೆ ಎಲ್ಲಾ ಭಾವನೆಗಳು ಇರುವ ಮಂಗಳಮುಖಿಯರನ್ನು ಸಮಾಜ ಪ್ರತ್ಯೇಕವಾಗಿ ಕಾಣದೇ ವಿಶ್ವಾಸ ಪ್ರೀತಿಯಿಂದ ನಮಗೆ ಬದುಕಲು ಅವಕಾಶ ಮಾಡಿಕೊಡಬೇಕು, ನಾವು ಕಷ್ಟಪಟ್ಟು ಬದುಕುತ್ತೇವೆ, ನಿಮ್ಮ ಆಶೀರ್ವಾದ ಇರಲಿ ಎಂದರು. ಒಕ್ಕಲಿಗ ಹಾಗೂ ಕೊಂಕಣ ಖಾರ್ವಿ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಸಂಘಟಕ ಅಶೋಕ ಕಾಸರಕೋಡ ಎರಡೂ ದಿನ ಸ್ವಾಗತಿಸಿ ಅಭಿನಂದಿಸಿದರು.