ಹಾಸ್ಯಗಾರರಿಗೆ ಕಾಂತಾವರ ಕನ್ನಡ ಸಂಘದ ʼಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿʼ

ಶಿರಸಿ: ಉಡುಪಿಯ ಕಾಂತಾವರ ಕನ್ನಡ ಸಂಘವು ಕೊಡಮಾಡುವ ಸಾಹಿತ್ಯ, ಸಂಶೋಧನೆ, ಪತ್ರಿಕೋದ್ಯಮ, ಶಿಕ್ಷಣ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿರಸಿಯ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಸೇರಿ ಏಳು ಜನ ಸಾಧಕರಿಗೆ ಸಂಘದ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅಪರೂಪದ ಯಕ್ಷಗಾನ ಸಂಶೋಧನಾ ಗ್ರಂಥ ‘ದಶರೂಪಕಗಳ ದಶಾವತಾರ’ ಕೃತಿ ರಚಿಸಿದ ನಿವೃತ್ತ ಪತ್ರಿಕಾ ಸಂಪಾದಕ, ಕವಿ ಮತ್ತು ಬರಹಗಾರರಾಗಿರುವ ಅಶೋಕ ಹಾಸ್ಯಗಾರ ಅವರನ್ನು ಆಯ್ಕೆ ಮಾಡಲಾಗಿದೆ.


ಅಶೋಕ ಹಾಸ್ಯಗಾರ ಅವರು ಪತ್ರಕರ್ತ, ಕವಿ ಮತ್ತು ಅಂಕಣಕಾರರಾಗಿ ಪ್ರಸಿದ್ಧರಾಗಿದ್ದಾರೆ. ಹತ್ತು ವರ್ಷಗಳಿಗೂ ಮೀರಿ ಅಧ್ಯಯನ ನಡೆಸಿ ಅವರು ರಚಿಸಿದ ‘ದಶರೂಪಕಗಳ ದಶಾವತಾರ’ ಎಂಬ ಕೃತಿಯು ಅಪರೂಪದಲ್ಲಿ ಅಪರೂಪವಾದ ಸಂಶೋಧನಾ ಗ್ರಂಥವಾಗಿದೆ. ಇದು ಪ್ರಕಟವಾದ ಬೆನ್ನಲ್ಲೇ ಮಂಗಳೂರು ವಿಶ್ವ ವಿದ್ಯಾಲಯದ ‘ಯಕ್ಷಮಂಗಳ’ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದು ಅವರ ಹೆಗ್ಗಳಿಕೆಯಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಸ್ಟಿಕ್ ಸೋಡಾ ಕಾರ್ಖಾನೆಯಲ್ಲಿ ಮೊದಲು ಉದ್ಯೋಗಿಯಾಗಿದ್ದ ಅವರು ನಂತರ ಮಾಧ್ಯಮ ರಂಗವನ್ನು ಪ್ರವೇಶಿಸಿದರು. ʼಕರಾವಳಿ ಮುಂಜಾವುʼ, ‘ಲೋಕ ಧ್ವನಿ’, ‘ಜನಮಾಧ್ಯಮ’ ಮೊದಲಾದ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ‘ಸೂರಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಪ್ರಶಸ್ತಿ’ ಮಹತ್ವದ್ದಾಗಿವೆ. ಪ್ರಸ್ತುತ, ಅವರು ಕಾವ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯಮೀಮಾಂಸೆಯ ತುಲನಾತ್ಮಕ ಅಧ್ಯಯನದ ಕಾವ್ಯದ ಮಹತ್ವವನ್ನು ಸಾರುವ ‘ಭಾರತೀಯ ಕಾವ್ಯ ವಿಲಾಸ’ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸುತ್ತಿದ್ದಾರೆ.
ಡಿಸೆಂಬರ್‌ 28ರಂದು ನಡೆಯುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಕನ್ನಡ ಸಂಘದ ಸುವರ್ಣ ಸಂಭ್ರಮದ ದ್ವಿತೀಯ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.

ಇನ್ನು ಈ ಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿಯು 10,000 ರೂ. ಮತ್ತು ತಾಮ್ರಪತ್ರ ಒಳಗೊಂಡಿದೆ.