ಭಟ್ಕಳ ದೇವಾಲಯ ಎದುರು ಗೋ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕಾರವಾರ: ಭಟ್ಕಳ ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಭಟ್ಕಳ ತಾಲ್ಲೂಕಿನ ಪುರವರ್ಗ ನಿವಾಸಿಗಳಾದ ಮಹ್ಮದ್ ರೆಹೀನ್ (28) ಮತ್ತು ಮಹ್ಮದ್ ಫೈಜಾನ್ (25) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ತೊಡಗಿಸಿಕೊಂಡಿರುವ ಶಂಕೆ ಇದ್ದು, ಅವರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚೆನ್ನಪಟ್ಟಣದ ಶ್ರೀ ಹನುಮಂತ ದೇವಸ್ಥಾನ ಆವರಣದಲ್ಲಿ ಬೆಳಿಗ್ಗೆ 3.15ರ ಸುಮಾರಿಗೆ ಮಾರುತಿ ಸುಜುಕಿ ಫ್ರಾನ್ಎಕ್ಸ್ ಕಾರಿನಲ್ಲಿ ಆರೋಪಿಗಳು ಗೋವನ್ನು ಕದ್ದು ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು. ಗೋವನ್ನು ಕಾರಿನೊಳಗೆ ಹಿಂಸಾತ್ಮಕವಾಗಿ ಎಳೆದೊಯ್ದ ದೃಶ್ಯ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು.

ಕಳ್ಳರು ಮೂಢಭಟ್ಕಳ ಬೈಪಾಸ್ ಮಾರ್ಗವಾಗಿ ಪರಾರಿಯಾಗಿರುವ ಮಾಹಿತಿ ಆಧರಿಸಿ ಪೊಲೀಸರು ತಕ್ಷಣ ಸುಳಿವುಗಳನ್ನು ಸಂಗ್ರಹಿಸಿ ತನಿಖೆ ನಡೆಸಿದರು. ಈ ಹಿಂದೆ ಕೂಡ ಇದೇ ದೇವಸ್ಥಾನ ಆವರಣದಲ್ಲಿ ಗೋ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಕಳವಳಗೊಳಿಸಿದ್ದಿತ್ತು. ಸದ್ಯ ಭಟ್ಕಳ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ವೇಗದ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಗೋ ಸಾಗಾಟ ಮತ್ತು ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.