ಹರಿಯಾಣ, ನವೆಂಬರ್ 16: ದೆಹಲಿಯಲ್ಲಿ ನವೆಂಬರ್ 10ರಂದು ನಡೆದ ಕಾರ್ ಸ್ಫೋಟ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಈ ಪ್ರಕರಣದಲ್ಲಿ ಹಣಕಾಸಿನ ಜಾಲತಾಣದ ಶಂಕೆ ಹಿನ್ನೆಲೆಯಲ್ಲಿ ಈಗ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಕೂಡ ಪ್ರವೇಶಿಸಿದೆ. ಘಟನೆಯಲ್ಲಿ ಸಂಪರ್ಕ ಹೊಂದಿದೆ ಎಂದು ಶಂಕಿಸಲಾದ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಹರಿಯಾಣ ಹಾಗೂ ದೆಹಲಿ-ಎನ್‌ಸಿಆರ್ ಪ್ರದೇಶದ ಕನಿಷ್ಠ 25 ಸ್ಥಳಗಳಲ್ಲಿ ಇಂದು ಮುಂಜಾನೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗ್ಗೆ 5 ಗಂಟೆಗೆ ಆರಂಭವಾದ ಈ ದಾಳಿ, ವಿಶ್ವವಿದ್ಯಾಲಯದ ಟ್ರಸ್ಟಿಗಳು ಹಾಗೂ ಸಂಬಂಧಿತ ವ್ಯಕ್ತಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಕೇಂದ್ರೀಕರಿಸಿದೆ. ಈಗಾಗಲೇ ಬಂಧಿತ ಕೆಲವು ಶಂಕಿತರು ನೇರವಾಗಿ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ನವೆಂಬರ್ 10ರಂದು ಕೆಂಪುಕೋಟೆ ಸಮೀಪ ಕಾರ್ ಬಾಂಬ್ ಸ್ಫೋಟ ಸಂಭವಿಸಿ 115 ಜನರು ಸಾವಿಗೀಡಾಗಿದ್ದರು. ಈ ದಾಳಿಯ ಮುಖ್ಯ ಆರೋಪಿ ಡಾ. ಉಮರ್ ಉನ್ ನಬಿ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂಬುದು ದೃಢಪಟ್ಟಿದೆ. ಇದೇ ಪ್ರಕರಣದಲ್ಲಿ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ಇನ್ನೂ ಹಲವು ವೈದ್ಯರನ್ನೂ ಬಂಧಿಸಲಾಗಿದೆ.
ಈ ನಡುವೆ, ನವೆಂಬರ್ 13ರಂದು ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಂಬಂಧಿತ ಗಂಭೀರ ಅಕ್ರಮಗಳ ಹಿನ್ನೆಲೆಯಲ್ಲಿ ಶೋ-ಕಾಸ್ ನೋಟಿಸ್ ನೀಡಲಾಗಿದ್ದು, ಈಗ ಇಡಿದಾಳಿಯಿಂದ ವಿಶ್ವವಿದ್ಯಾಲಯವು ತನಿಖೆಯ ಕೇಂದ್ರಬಿಂದುವಾಗಿದೆ.
