ಕಾರವಾರ: ದಾಂಡೇಲಿಯಲ್ಲಿ 2024ರಿಂದ ಹೆಚ್ಚುತ್ತಿರುವ ಬೀದಿ ನಾಯಿಗಳ ಉಪಟಳದಿಂದ ಅಮಾಯಕ ಮಕ್ಕಳು ಹಾಗೂ ಸಾರ್ವಜನಿಕರು ನಿರಂತರವಾಗಿ ಕಚ್ಚಿಸಿಕೊಂಡು ಗಾಯಗೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿವೆ. ಈ ಹಿನ್ನೆಲೆ, ದಾಂಡೇಲಿ ನಗರಸಭೆ ಕೊನೆಗೂ ಬೀದಿ ನಾಯಿ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದೆ.
ಒಂದೇ ದಿನ ಮೂವರು ನಾಗರಿಕರನ್ನು ಕಚ್ಚಿದ ನಾಯಿಗೆ ರೇಬೀಸ್ ಸೋಂಕು ಇದೆಯೇ ಎಂಬುದನ್ನು ಪರಿಶೀಲಿಸಲು, ನಗರಸಭೆ ಸಿಬ್ಬಂದಿಯನ್ನು ತುರ್ತು ನಾಯಿ ಹಿಡಿಯುವ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಜರುಗಿಸುತ್ತಿದೆ.

ನಗರದ ಜನರು ಹಲವು ದಿನಗಳಿಂದ ನಗರಸಭೆಗೆ ನಾಯಿ ನಿಯಂತ್ರಣಕ್ಕೆ ಒತ್ತಾಯಿಸುತ್ತಿದ್ದರೂ, ಹಿಂದಿನ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಕಾನೂನು ನಿಯಮಗಳು ಹಾಗೂ ಪರವಾನಗಿ ಪ್ರಕ್ರಿಯೆಗಳ ಹೆಸರಿನಲ್ಲಿ ಕ್ರಮವನ್ನು ಮುಂದೂಡುತ್ತಿದ್ದರು. ಇದೀಗ ಜನಪ್ರತಿನಿಧಿಗಳ ಅವಧಿ ಮುಗಿದ ಕಾರಣ, ಆಡಳಿತಾಧಿಕಾರಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಕಳೆದ ಒಂದು ವಾರದಲ್ಲಿ 2 ವಯಸ್ಕರು ಹಾಗೂ 3 ಮಕ್ಕಳು ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಕಳೆದ ಶುಕ್ರವಾರ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಹತ್ತಿರ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿತ್ತು. ಘಟನೆ ತಿಳಿದ ತಕ್ಷಣ ಪೌರಾಯುಕ್ತ ವಿವೇಕ ಬನ್ನೆ ಸ್ಥಳಕ್ಕೆ ಭೇಟಿ ನೀಡಿ, ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ಒದಗಿಸಿ, ನಾಯಿಗಳ ಕಾಟ ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅದರಂತೆ, ರವಿವಾರ ಬೆಳಿಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಂಚಾಲನೆ ನಡೆಸಿ, ಆಕ್ರಮಣಕಾರಿ ನಾಯಿಗಳನ್ನು ಬಲೆ ಹಾಕಿ ಹಿಡಿದು ವಾಹನದಲ್ಲಿ ಸಾಗಿಸಲಾಯಿತು. ರೇಬೀಸ್ ಪರೀಕ್ಷೆಗಾಗಿ ಪಶುವೈದ್ಯ ಇಲಾಖೆಯ ಸಹಾಯ ಪಡೆಯಲಾಗಿದೆ.
ದಾಂಡೇಲಿ ನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ನಾಯಿ ಹಿಡಿಯುವ ಕಾರ್ಯಾಚರಣೆ ಮುಂದಿನ ಎರಡು ವಾರಗಳವರೆಗೆ ಮುಂದುವರಿಯಲಿದೆ ಎಂದು ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದ್ದಾರೆ.


