ಕಾರವಾರ: ದೆಹಲಿಯಲ್ಲಿ ಸಂಭವಿಸಿದ ಸ್ಫೋಟ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಾದ್ಯಂತ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಎಸ್‌ಪಿ ದೀಪನ್ ಅವರು ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದಾರೆ.

ಕಾರವಾರ ಬಂದರು ಸೇರಿದಂತೆ ಜಿಲ್ಲೆಯ ಪ್ರಮುಖ ಬಂದರುಗಳು, ರೈಲ್ವೇ ನಿಲ್ದಾಣಗಳು, ಬಸ್‌ಸ್ಟ್ಯಾಂಡ್‌ಗಳು ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪ್ಯಾಟ್ರೊಲಿಂಗ್ ನಡೆಸುತ್ತಿದ್ದಾರೆ. ಕಾರವಾರದ ಕ್ರಿಮ್ಸ್ ಆಸ್ಪತ್ರೆ, ಬಂದರು ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಎಸ್‌ಪಿ ದೀಪನ್ ಸ್ವತಃ ಪರಿಶೀಲನೆ ನಡೆಸಿದ್ದಾರೆ.

ರೈಲ್ವೇ ನಿಲ್ದಾಣ, ಬಂದರು, ಬಸ್‌ಸ್ಟ್ಯಾಂಡ್ ಪ್ರದೇಶಗಳಲ್ಲಿ ಬಾಂಬ್ ಹಾಗೂ ಡಾಗ್ ಸ್ಕ್ವಾಡ್ ತಂಡಗಳಿಂದ ತನಿಖೆ ಮತ್ತು ಪರಿಶೀಲನೆ ನಡೆಯುತ್ತಿದೆ. ಜೊತೆಗೆ, ಗೋವಾ ಗಡಿಯ ಮಾಜಾಳಿ, ರಾಮನಗರ ತಾಲೂಕಿನ ಅನಮೋಡ್ ಭಾಗಗಳಲ್ಲಿ ಜಿಲ್ಲೆಗೆ ಪ್ರವೇಶಿಸುವ ವಾಹನಗಳಿಗೂ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ.

ಕದಂಬ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶಗಳಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಗೋವಾ, ಭಟ್ಕಳ ಮತ್ತು ರಾಮನಗರ ಗಡಿಯಿಂದ ಜಿಲ್ಲೆಗೆ ಬರುವ ಪ್ರತಿಯೊಂದು ವಾಹನಗಳನ್ನೂ ಪೊಲೀಸರು ನಿಖರವಾಗಿ ಪರಿಶೀಲಿಸುತ್ತಿದ್ದಾರೆ.



