ʻಫರಿದಾಬಾದ್ ಮಾಡ್ಯೂಲ್ʼ ಗ್ಯಾಂಗ್‌ ಬಂಧನಕ್ಕೆ ಪ್ರತೀಕಾರವಾಗಿ ವೈದ್ಯ ಉಮರ್‌ ನಬಿ ಕಾರು ಸ್ಫೋಟ!

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟಗೊಂಡ ಐ20 ಕಾರಿನ ಹಿಂದೆ ಫರಿದಾಬಾದ್ ಮೂಲದ ವೈದ್ಯ ಡಾ. ಉಮರ್ ಯು. ನಬಿ ಇದ್ದಿರಬಹುದೆಂಬ ಶಂಕೆ ಗಟ್ಟಿಗೊಂಡಿದೆ. ತನಿಖಾ ಸಂಸ್ಥೆಗಳ ಪ್ರಾಥಮಿಕ ವರದಿಗಳ ಪ್ರಕಾರ, ಫರಿದಾಬಾದ್‌ನಲ್ಲಿ ಪತ್ತೆಯಾದ 2,900 ಕೆ.ಜಿ. ಸ್ಫೋಟಕ ಕೇಸಿನಲ್ಲಿ ಭಾಗಿಯಾಗಿದ್ದ “ಫರಿದಾಬಾದ್ ಟೆರ್‌ರ್ ಮಾಡ್ಯೂಲ್‌” ಗೆ ನಬಿ ನೇರ ಸಂಪರ್ಕ ಹೊಂದಿದ್ದನೆಂಬ ಮಾಹಿತಿ ಲಭ್ಯವಾಗಿದೆ.

ಪುಲ್ವಾಮಾ ಮೂಲದ ಉಮರ್ ನಬಿ, ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಷಯ ತಿಳಿದು ಆತಂಕಗೊಂಡು ಸೋಮವಾರ ಏಕಾಂಗಿಯಾಗಿ ಈ ಸ್ಫೋಟಕ ದಾಳಿ ನಡೆಸಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಕಾರಿನ ಒಳಗೆ ಪತ್ತೆಯಾದ ಕತ್ತರಿಸಿದ ಕೈ ನಬಿಯದ್ದೇ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ತನಿಖಾಧಿಕಾರಿಗಳು ನಬಿಯ ಕುಟುಂಬದ ಡಿಎನ್‌ಎ ಮಾದರಿಗಳನ್ನು ಕಾಶ್ಮೀರದಿಂದ ಸಂಗ್ರಹಿಸಿದ್ದಾರೆ.

ಮೂಲಗಳ ಪ್ರಕಾರ, ಉಮರ್ ಭಟ್ ಅವರ ಪುತ್ರ ಡಾ. ಉಮರ್ ಯು. ನಬಿ ಫರಿದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಫೆಬ್ರವರಿ 24, 1989ರಲ್ಲಿ ಜನಿಸಿದ ಉಮರ್, ಸದ್ಯ ಬಂಧನದಲ್ಲಿರುವ ಡಾ. ಅದೀಲ್ ಅವರ ಆಪ್ತ ಸ್ನೇಹಿತನಾಗಿದ್ದನೆಂಬುದು ವರದಿ. ಅವರ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಸುಮಾರು 10–15 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಉಮರ್‌ಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ಘಟನೆ ಬಳಿಕ ಪೊಲೀಸರು ಅವರ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಡಾ. ಉಮರ್ ಎನ್‌ಕ್ರಿಪ್ಟ್ ಮಾಡಿದ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿದ್ದ ವೈದ್ಯಕೀಯ ವೃತ್ತಿಪರರ ಗುಂಪಿನ ಭಾಗವಾಗಿದ್ದರು. ಫರಿದಾಬಾದ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ತನ್ನ ತಂಡದವರನ್ನು ಬಂಧಿಸಿದ್ದಕ್ಕೆ ಸಿಟ್ಟಾಗಿ, ತಾನು ಬಂಧನಕ್ಕೆ ಒಳಗಾಗುವ ಮುನ್ನ ಸ್ಫೋಟ ನಡೆಸಲು ನಿರ್ಧರಿಸಿದ್ದಾನೆಂದು ಶಂಕಿಸಲಾಗಿದೆ.