ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (89) ಅವರನ್ನು ಉಸಿರಾಟದ ತೊಂದರೆಯಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಅವರು, ಇಂದು (ನ.10) ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಯಿತು.

ಮೂಲಗಳ ಪ್ರಕಾರ, ಸದ್ಯ ಧರ್ಮೇಂದ್ರ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿದುಬಂದಿದೆ. ಈ ತಿಂಗಳ ಡಿಸೆಂಬರ್ 8 ರಂದು 90ನೇ ವಯಸ್ಸಿಗೆ ಕಾಲಿಡಲಿರುವ ಧರ್ಮೇಂದ್ರ, ಕಳೆದ ವಾರವೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದಕ್ಕೂ ಮುನ್ನ, ಏಪ್ರಿಲ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

ಆರು ದಶಕಗಳ ವೃತ್ತಿಜೀವನದಲ್ಲಿ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದ ಗುರುತು ಬಿಟ್ಟಿದ್ದಾರೆ. 1960ರಲ್ಲಿ ದಿಲ್ ಭೀ ತೇರಾ ಹಮ್ ಭೀ ತೇರೆ’ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು, ‘ಬಂದಿನಿ’, ‘ಅನುಪಮಾ’, ‘ಶೋಲೆ’, ‘ಚುಪ್ಕೆ ಚುಪ್ಕೆ’, ‘ಮೇರಾ ಗಾಂವ್ ಮೇರಾ ದೇಶ್’ ಮತ್ತು ‘ಡ್ರೀಮ್ ಗರ್ಲ್’ ಮುಂತಾದ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, 2025ರ ಆರಂಭದಲ್ಲಿ ಬಿಡುಗಡೆಯಾದ ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ಧರ್ಮೇಂದ್ರ ಕಾಣಿಸಿಕೊಂಡಿದ್ದರು. ಮುಂದಿನ ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ‘ಇಕ್ಕಿಸ್’ ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ.