ಬೆಂಗಳೂರು: ಹಲವು ವರ್ಷಗಳಿಂದ ವಿಳಂಬಗೊಂಡಿದ್ದ ಹೊಸಕೆರೆಹಳ್ಳಿ ಫ್ಲೈಓವರ್ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ಸಂಚಾರಕ್ಕೆ ಸಿದ್ಧವಾಗಿದೆ. ಈ ವಾರದ ಅಂತ್ಯದಲ್ಲಿ ಫ್ಲೈಓವರ್ ಚಾಲನೆಗೊಳ್ಳುವ ಸಾಧ್ಯತೆ ಇದೆ. ಸುಮಾರು 500 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯ ಶೇ.90 ರಷ್ಟು ಕೆಲಸ ಪೂರ್ಣಗೊಂಡಿದೆ. ಮಧ್ಯಭಾಗದಲ್ಲಿ ಡಾಂಬರೀಕರಣ ಮುಗಿದಿದ್ದು, ಎರಡೂ ಬದಿಗಳಲ್ಲಿ ವೇಟ್‌ಮಿಕ್ಸ್ ಹಾಗೂ ಬಣ್ಣ ಬಳಿಯುವ ಕೆಲಸ ಅಂತಿಮ ಹಂತದಲ್ಲಿದೆ.

ಮೇಲ್ಸೇತುವೆಯ ಕಾಮಗಾರಿ ಸಂಪೂರ್ಣ ಮುಗಿದ ಬಳಿಕ, ಈ ವಾರದಲ್ಲೇ ವಾಹನಗಳ ಟ್ರಯಲ್ ರನ್ ನಡೆಯಲಿದೆ. ನಂತರ ದಿನಾಂಕ ನಿಗದಿಪಡಿಸಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿ ಸಂಚಾರಕ್ಕೆ ಅನುಮತಿ ನೀಡಲಾಗುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫ್ಲೈಓವರ್‌ಗೆ ಉದ್ಘಾಟನೆ ಮಾಡುವ ನಿರೀಕ್ಷೆ ಇದೆ. ಫ್ಲೈಓವರ್ ಸಂಚಾರಕ್ಕೆ ತೆರೆಯುತ್ತಿದ್ದಂತೆಯೇ ನಾಯಂಡನಹಳ್ಳಿ–ಬನಶಂಕರಿ ಮಾರ್ಗ ಮತ್ತು ಪಿಇಎಸ್ ಕಾಲೇಜ್ ರಸ್ತೆಯ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ.
