ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಬೇಟೆ: ಸಿಮ್ ಕಾನ್ವರ್ ಜಾಲದಲ್ಲಿದ್ದ ಕೇರಳದ ಇಬ್ಬರು ವಶಕ್ಕೆ

ಬೆಂಗಳೂರು, ಆಗಸ್ಟ್ 5: ನಗರದ ತಾಂತ್ರಿಕ ಕೇಂದ್ರವಾಗಿರುವ ವೈಟ್‌ಫೀಲ್ಡ್‌ ಬಳಿ ಇಮ್ಮಡಿಹಳ್ಳಿಯಲ್ಲಿ, ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಸಿಮ್ ಜಾಲ ಬಯಲಾಗಿದೆ. ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ಸಿಕ್ಕಿದ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಈ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಕೇರಳದ ಮೂಲದ ಮೊಹಮ್ಮದ್ ಸಫ್ಪಾಪ್ ಮತ್ತು ಫಯಾಜ್ ಎಂಬವರಾಗಿದ್ದು, ಇವರಿಬ್ಬರೂ ಇಮ್ಮಡಿಹಳ್ಳಿಯ ಮನೆಯೊಂದರಲ್ಲಿ ರಹಸ್ಯ ಟೆಲಿಫೋನ್ ಎಕ್ಸ್‌ಚೇಂಜ್ ಸ್ಥಾಪಿಸಿ, ಆಧುನಿಕ ತಂತ್ರಜ್ಞಾನ ಬಳಸಿ ವಿದೇಶಿ ಕರೆಗಳನ್ನು ದೇಶೀಯ ಕರೆಗಳಾಗಿ ಪರಿವರ್ತನೆ ಮಾಡುತ್ತಿದ್ದರು. ಈ ಮೂಲಕ ದೂರಸಂಪರ್ಕ ಸಂಸ್ಥೆಗಳು ಹಾಗೂ ಸರ್ಕಾರಕ್ಕೆ ಬೃಹತ್ ಆರ್ಥಿಕ ನಷ್ಟ ಉಂಟಾಗಿತ್ತು.

ಆರೋಪಿಗಳು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಡ ಭಾರತೀಯ ಕಾರ್ಮಿಕರನ್ನು ಟಾರ್ಗೆಟ್ ಮಾಡಿ, ಕಡಿಮೆ ದರದಲ್ಲಿ ತಾಯ್ನಾಡಿಗೆ ಕರೆ ಮಾಡುವ ಅವಕಾಶ ನೀಡುವುದಾಗಿ ನಂಬಿಸಿ, ಅವರ ವೈಯಕ್ತಿಕ ವಿವರಗಳನ್ನು ಪಡೆದು ಸಿಮ್ ಕಾರ್ಡ್‌ಗಳು ಮತ್ತು ತಂತ್ರಜ್ಞಾನ ಉಪಕರಣಗಳನ್ನು ಖರೀದಿ ಮಾಡುತ್ತಿದ್ದರು. ಇವರ ಸೆಟ್‌ಅಪ್‌ನಲ್ಲಿ 702 ಸಿಮ್ ಕಾರ್ಡ್, 9 ಸಿಮ್ ಬಾಕ್ಸ್, 6 ರೌಟರ್, ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪರಿವರ್ತಿತ ಕರೆಗಳ ಮೂಲಕ ಈ ಗ್ಯಾಂಗ್ ಹವಾಲಾ ಮಾರ್ಗದ ಮೂಲಕ ತಿಂಗಳಿಗೆ 4 ರಿಂದ 5 ಲಕ್ಷ ರೂಪಾಯಿ ಗಳಿಸುತ್ತಿದ್ದರ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆ ಇದೇ ರೀತಿಯ ಕೃತ್ಯಗಳಿಗೂ ಬೆಂಗಳೂರು ಸಾಕ್ಷಿಯಾಗಿದೆ. ಇದೀಗ ಸಿಸಿಬಿ ಮತ್ತೆ ಈ ಜಾಲವನ್ನು ಬಯಲಿಗೆ ತಂದಿರುವುದು ಹಿಗ್ಗಿನ ವಿಷಯ.

ಇದೇ ವೇಳೆ, ಕಾನೂನು ಸಹಾಯದ ಹೆಸರಿನಲ್ಲಿ ಮತ್ತೊಂದು ಭಾರೀ ಸೈಬರ್ ವಂಚನೆ ನಡೆದಿರುವುದು ಬಯಲಾಗಿದೆ. ರಾಮಮೂರ್ತಿ ನಗರದಲ್ಲೊಬ್ಬ ವ್ಯಕ್ತಿಗೆ ಸೋಲಾರ್ ಪ್ಲಾಂಟ್ ಅಳವಡಿಸುವ ನೆಪದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ವಂಚಿಸಿದ ಜಾಲದ ಮೂಲದ ಹುಡುಕಾಟದ ವೇಳೆ, ‘Quickmoto Legal Service’ ಎಂಬ ನಕಲಿ ಸಂಸ್ಥೆ ಆಧಾರದ ಮೇಲೆ 12.5 ಲಕ್ಷ ರೂಪಾಯಿ ಲೂಟಿ ಮಾಡಿರುವ ಪ್ರಕರಣ ಸಿಸಿಬಿ ತನಿಖೆಯಲ್ಲಿ ತಲೆ ಎತ್ತಿದೆ.

ಆರೋಪಿಗಳು Zoiper -5 ಎನ್ನುವ VoIP ಆಧಾರಿತ ಅಪ್ಲಿಕೇಶನ್ ಬಳಸಿ ಸೈಬರ್ ವಂಚನೆ ಮಾಡಿದ್ದರು. ಅದರಲ್ಲೂ ಈ ಹಿಂದೆ ಸೈಬರ್ ವಂಚನೆಗೆ ಒಳಗಾಗಿದ್ದವರನ್ನು ಮತ್ತೆ ಸಂಪರ್ಕ ಮಾಡಿಕೊಂಡು ಅವರಿಗೆ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿ ಮತ್ತೆ ಹಣ ಪಡೆದು ವಂಚನೆ ಮಾಡಿದ್ದರು. ಈ ಪ್ರಕರಣ ಕಿಂಗ್ ಪಿನ್ ತೋಫುಲ್ ಮಹಮದ್ ಅರೆಸ್ಟ್ ಮಾಡಿದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ಆರೋಪಿಗಳು ಇಂಡಿಯಾ ಲೀಗಲ್ ಎನ್ನುವ ನಕಲಿ ಕಂಪನಿ ತೆರೆದಿರುವುದನ್ನು ಪತ್ತೆಮಾಡಿದ್ದಾರೆ. ಈ ಕಂಪನಿಯಲ್ಲಿ ಹನ್ನೆರಡು ಜನರು ಟೆಲಿಕಾಲರ್​​ಗಳನ್ನು ನೇಮಿಸಿಕೊಂಡು ಕೃತ್ಯ ಎಸಗಿದ್ದರು. ಪ್ರಮುಖ ಆರೋಪಿಯ ಸಹೋದರ ಒರ್ವ ದುಬೈಯಲ್ಲಿ ನಕಲಿ ಕಂಪನಿ ತೆರದು ಸೈಬರ್ ವಂಚನೆ ಮಾಡಿರುವುದು ಪತ್ತೆಯಾಗಿದ್ದು, ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.