ಬೆಂಗಳೂರು: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್, ಅವರ ಪತ್ನಿ ಹಾಗೂ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಕುರಿತು ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿದ್ದಾರೆ. ದೂರಿನಲ್ಲಿ ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ, ವರದಕ್ಷಿಣೆ ಬಗ್ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ನಾನು ಹಾಗೂ ಎಸ್.ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆಯಾದೆವು. ಪವನ್ ವ್ಯಾಸಂಗ ಮಾಡದ ಕಾರಣ ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರು. ಇದರಿಂದಾಗಿ ನಾನೇ ಕೆಲಸಕ್ಕೆ ಹೋಗಿ ಮನೆ ಸಾಗಿಸುತ್ತಿದ್ದೆ. ನಂತರ ಪವನ್ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಬೇಕೆಂದು ಯೋಚಿಸಿದ್ದರು. ಇದಕ್ಕಾಗಿ ನನ್ನ ಬಳಿ ದುಡ್ಡು ಕೇಳಿದ್ದರು. ಆಗ ನನ್ನ ತಾಯಿಯ ಒಡವೆ ಕೊಟ್ಟಿದ್ದೆ. ಆದರೆ ಬಳಿಕ ಲಾಸ್ ಆಗಿ ಇನ್ಸ್ಟಿಟ್ಯೂಟ್ ಮುಚ್ಚಬೇಕಾದ ಪರಿಸ್ಥಿತಿ ಬಂತು.
ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ನೋಡಿಕೊಂಡಿದ್ದೆವು. ವರದಕ್ಷಿಣೆ ಕೊಟ್ಟಿದ್ದರೂ ಹಲ್ಲೆ ನಡೆಸಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ನನಗೆ ಹಾಗೂ ನನ್ನ ಮಗನಿಗೆ ತೊಂದರೆಯಾಗಿದೆ, ಒಂದು ವೇಳೆ ಏನಾದರೂ ಆದರೆ ಇವರುಗಳೇ ಕಾರಣ ಎಂದು ಆರೋಪಿಸಿ, ಕ್ರಮಕ್ಕಾಗಿ ಮನವಿ ಸಲ್ಲಿದ್ದಾರೆ .
