ಬೆಂಗಳೂರು: ಮುನ್ಸೂಚನೆ ಇಲ್ಲದೆ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ನಗರ ಅಸ್ತವ್ಯಸ್ತಗೊಂಡಿತು. ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ಬೃಹತ್ ಮರಗಳು ಧರೆಗುರುಳಿದವು. ಇದರಿಂದ ವಾಹನ ಸಂಚಾರದಲ್ಲಿ ಗೊಂದಲ ಉಂಟಾಯಿತು. ರಾಜಾಜಿನಗರ 4ನೇ ಬ್ಲಾಕ್‌ನಲ್ಲಿ ಚಂದ್ರಮ್ಮ ಮತ್ತು ಪೀಟರ್ ಅವರ ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಎರಡು ಕುಟುಂಬಗಳು ಮನೆಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿವೆ.

ಮರ ಉರುಳಿದ ಪರಿಣಾಮ 5 ಕಾರುಗಳು, ಒಂದು ಟಾಟಾ ಏಸ್ ಮತ್ತು 3-4 ಬೈಕ್‌ಗಳು ಜಖಂಗೊಂಡಿವೆ. ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಮರ ಬಿದ್ದರೂ ಸಹಾಯಕ್ಕಾಗಿ ಕರೆ ಮಾಡಿದ ಬಿಬಿಎಂಪಿ, ಹೊಯ್ಸಳ ಹಾಗೂ ಬೆಸ್ಕಾಂ ಸಿಬ್ಬಂದಿ ತಕ್ಷಣ ಸ್ಪಂದಿಸಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮರ ಬಿದ್ದಿರುವುದರಿಂದ 5ನೇ ಮುಖ್ಯ ರಸ್ತೆ (ಚಾಮರಾಜಪೇಟೆ) ನಿಂದ 4ನೇ ಮುಖ್ಯರಸ್ತೆಗೆ ಹೋಗುವ ದಾರಿ ಬಂದ್ ಮಾಡಲಾಗಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಿದ್ದಾರೆ.

ಧಾರಾಕಾರ ಮಳೆಯಿಂದ ಬೆಂಗಳೂರಿನ ಅನೇಕ ಕಡೆಗಳಲ್ಲಿ ರಸ್ತೆ ಜಲಾವೃತವಾಗಿದ್ದು, ನಿಧಾನಗತಿಯ ಸಂಚಾರ ಕಂಡುಬರುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
