ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿರುವ ನಟ ವಿಷ್ಣುವರ್ಧನ್ ಸಮಾಧಿ ತೆರವು ಮಾಡಿದ ಬಳಿಕ ವಿವಾದ ಮತ್ತಷ್ಟು ತೀವ್ರವಾಗಿದೆ. ಅಭಿಮಾನಿಗಳು ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸುತ್ತಿರುವಾಗ, ಅರಣ್ಯಾಧಿಕಾರಿಗಳು ಸ್ಟುಡಿಯೋ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆಗಸ್ಟ್ 22ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಅವರು ಬೆಂಗಳೂರಿನ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಬರೆದ ಪತ್ರದಲ್ಲಿ ಸ್ಟುಡಿಯೋ ಭೂಮಿ ಲೀಸ್ ನಿಯಮ ಉಲ್ಲಂಘನೆ ನಡೆದಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರತ್ತ ಎಲ್ಲರ ದೃಷ್ಟಿಯಿದೆ.

1970ರಲ್ಲಿ ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ 20 ಎಕರೆ ಭೂಮಿ 20 ವರ್ಷಗಳ ಲೀಸ್‌ಗೆ ನೀಡಲಾಗಿತ್ತು. ಬಳಿಕ ಲೀಸ್ ಅವಧಿ ವಿಸ್ತರಣೆ ಮಾಡಲಾಯಿತು. ಆದರೆ 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ, ಅವರ ಪುತ್ರರಾದ ಶ್ರೀನಿವಾಸ್ ಮತ್ತು ಗಣೇಶ್ 10 ಎಕರೆ ಜಮೀನು ಮಾರಾಟಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದರು. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಬಳಸುವುದಾಗಿ ಭರವಸೆ ನೀಡಿದರೂ, ಈವರೆಗೆ ಯಾವುದೇ ಅಭಿವೃದ್ಧಿ ನಡೆದಿಲ್ಲ.

ಇದೀಗ ಬಾಲಕೃಷ್ಣ ಮೊಮ್ಮಗ ಕಾರ್ತಿಕ್, 1 ಎಕರೆಗೂ 14 ಕೋಟಿ ರೂಪಾಯಿಗಳಂತೆ ಜಮೀನು ಮಾರಾಟಕ್ಕೆ ಯೋಜನೆ ಮಾಡಿದ್ದಾರೆ ಎನ್ನುವ ಮಾಹಿತಿ ಅರಣ್ಯ ಇಲಾಖೆಗೆ ದೊರೆತಿದೆ. ಹೀಗಾಗಿ, ನಿಯಮ ಉಲ್ಲಂಘನೆ ಉಲ್ಲೇಖಿಸಿ ಸ್ಟುಡಿಯೋ ವಶಕ್ಕೆ ಪಡೆಯುವಂತೆ ಅರಣ್ಯಾಧಿಕಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
