ಹುಬ್ಬಳ್ಳಿ (ಆ.29): ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. “ಗೋವುಗಳನ್ನು ತಿನ್ನುವುದಿಲ್ಲ, ಮೂರ್ತಿ ಪೂಜೆಗೆ ನಂಬಿಕೆ ಇರುತ್ತದೆ ಎಂದು ಬಾನು ಮುಷ್ತಾಕ್ ಸ್ಪಷ್ಟಪಡಿಸಿದರೆ ಮಾತ್ರ ಉದ್ಘಾಟನೆಗೆ ನಾವು ಒಪ್ಪುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, “ಚಾಮುಂಡಿ ಬೆಟ್ಟ ಹಿಂದೂಗಳ ಪವಿತ್ರ ತಾಣ. ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ ಮನಗಾಣಬೇಕು” ಎಂದು ಮುತಾಲಿಕ್ ತಿರುಗೇಟು ನೀಡಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬಾನು ಮುಷ್ತಾಕ್ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರೂ, “ನಾಡದೇವಿ ಹಾಗೂ ನಾಡಹಬ್ಬದ ಚಾಲನೆಗೆ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಲ್ಲ” ಎಂದು ಸ್ಪಷ್ಟಪಡಿಸಿದರು. ಅಲ್ಲದೇ, “ಹಿಂದೂಗಳ ಹಬ್ಬಗಳಿಗೆ ಮಾತ್ರ ಷರತ್ತು ವಿಧಿಸುವುದು ಅನ್ಯಾಯ. ಬೇರೆ ಸಮುದಾಯಗಳ ಹಬ್ಬಗಳಿಗೆ ಇಂತಹ ನಿಯಮಗಳೇ ಇಲ್ಲ” ಎಂದು ಅವರು ಪ್ರಶ್ನಿಸಿದರು.

