ಪಾಟ್ನಾ: ಬಿಹಾರದಲ್ಲಿ ಆರ್‌ಜೆಡಿ ಪಕ್ಷ ಅಧಿಕಾರಕ್ಕೆ ಬಂದರೆ ಸಂಕ್ರಾಂತಿ ಹಬ್ಬದಂದು ಮಹಿಳೆಯರಿಗೆ 30 ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಬಿಹಾರದಲ್ಲಿ ಮೊದಲ ಹಂತದ ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿಯಿದ್ದು, ಮಹಾಘಟಬಂಧನ್ ಹಾಗೂ ಎನ್‌ಡಿಎ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಹೀಗಾಗಿ ಎರಡೂ ಕಡೆಯಿಂದ ಮತದಾರರಿಗೆ ಆಕರ್ಷಕ ಘೋಷಣೆಗಳು ಬರುತ್ತಿವೆ.
ಮಾತನಾಡಿದ ತೇಜಸ್ವಿ ಯಾದವ್ ಅವರು, ಬಿಹಾರದಲ್ಲಿ ಸರ್ಕಾರ ರಚಿಸಿದ ತಕ್ಷಣ ʻಮಾಯಿ ಬಹಿನ್ ಮಾನ್ʼ ಯೋಜನೆ ಆರಂಭಿಸಲಾಗುವುದು ಎಂದರು. ಈ ಯೋಜನೆಯಡಿ ಮಹಿಳೆಯರಿಗೆ ವಾರ್ಷಿಕ ₹30,000 ಆರ್ಥಿಕ ನೆರವು ನೀಡಲಾಗುವುದು. ಅಧಿಕಾರಕ್ಕೆ ಬಂದ ತಕ್ಷಣ ಜನವರಿ 14 ರಂದು ಸಂಕ್ರಾಂತಿ ದಿನ ಯೋಜನೆ ಜಾರಿಗೆ ತರಲಾಗುತ್ತದೆ ಮತ್ತು ಅಂದೇ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಿದರು.

ಅದರ ಜೊತೆಗೆ ರಾಜ್ಯ ಸರ್ಕಾರದ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಪುನರ್ ಜಾರಿಗೊಳಿಸಲಾಗುವುದು. ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರನ್ನು ಅವರ ತವರು ಜಿಲ್ಲೆಯಿಂದ 70 ಕಿಮೀ ವ್ಯಾಪ್ತಿಯಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು.ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗಿಂತ ಪ್ರತಿ ಕ್ವಿಂಟಾಲ್‌ಗೆ ₹300 ಹಾಗೂ ಗೋಧಿಗೆ ₹400 ಬೋನಸ್ ನೀಡಲಾಗುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದರು.
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪಿಎಸಿಎಸ್ ಮುಖ್ಯಸ್ಥರು ಮತ್ತು ವ್ಯಾಪಾರ ಮಂಡಳಿಗಳಿಗೆ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು. ಜೊತೆಗೆ ರಾಜ್ಯದ 8,400 ನೋಂದಾಯಿತ ವ್ಯಾಪಾರ ಮಂಡಳಿಗಳು ಹಾಗೂ ಪಿಎಸಿಎಸ್‌ಗಳ ವ್ಯವಸ್ಥಾಪಕರಿಗೆ ಗೌರವಧನ ನೀಡಲಾಗುವುದು ಎಂದರು.ಇದೇ ವೇಳೆ ಅವರು, ಈಗಾಗಲೇ ಆರ್‌ಜೆಡಿ ಪಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೀಡುವ ಗ್ಯಾರಂಟಿ ಘೋಷಣೆ ಮಾಡಿದೆ. ಇದರ ಹೊರತಾಗಿಯೂ ವಾರ್ಷಿಕ ₹30,000 ನೆರವು ನೀಡುವುದಾಗಿ ಸ್ಪಷ್ಟಪಡಿಸಿದರು.

