ಕಾರವಾರ: ಅರಬ್ಬಿ ಸಮುದ್ರದ ತೀರ ಭಾಗದಲ್ಲಿ ಲಕ್ಷಾಂತರ ತಾರ್ಲೆ ಮೀನುಗಳು ತೇಲಿ ಬಂದಿದ್ದು, ಮೀನುಗಾರರಿಗೆ ಭರ್ಜರಿ ಬೇಟೆ ಸಿಕ್ಕಿದೆ. ಕಳೆದ ಕೆಲವು ತಿಂಗಳ ಹವಾಮಾನ ಬದಲಾವಣೆಯಿಂದ ಸಂಕಷ್ಟದಲ್ಲಿದ್ದ ಮೀನುಗಾರಿಕೆ ಈಗ ಮತ್ತೆ ಚೇತರಿಕೆ ಕಾಣುತ್ತಿದೆ. ಕಾರವಾರ ಸಮೀಪದ ಸಮುದ್ರ ಭಾಗದಲ್ಲಿ ಆಳಕ್ಕೆ ಹೋಗದೇ ತೀರದ ಸಮೀಪದಲ್ಲೇ ರಾಶಿ ರಾಶಿಯಾಗಿ ಮೀನುಗಳನ್ನು ಹಿಡಿದಿದ್ದಾರೆ. ಹಲವು ವರ್ಷಗಳ ಬಳಿಕ ಈ ಪ್ರಮಾಣದ ತಾರ್ಲೆ ಮೀನುಗಳು ದೊರೆತಿರುವುದರಿಂದ ಮೀನುಗಾರರ ಮುಖದಲ್ಲಿ ಸಂತೋಷ ಮೂಡಿದೆ.



