ನವದೆಹಲಿ: ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ. ಹಿಂದುಜಾ ಲಂಡನ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಹಿಂದುಜಾ ಕುಟುಂಬದ ನಾಲ್ವರು ಸಹೋದರರಲ್ಲಿ ಎರಡನೆಯವರು. ಹಿರಿಯರಾದ ಶ್ರೀಚಂದ್ ಹಿಂದುಜಾ ಅವರು 2023ರಲ್ಲಿ ನಿಧನರಾಗಿದ್ದರು. ಉಳಿದ ಇಬ್ಬರು ಸಹೋದರರು ಪ್ರಕಾಶ್ ಹಿಂದುಜಾ ಮತ್ತು ಅಶೋಕ್ ಹಿಂದುಜಾ. ವ್ಯಾಪಾರ ವಲಯದಲ್ಲಿ “ಜಿಪಿ ಹಿಂದುಜಾ” ಎಂದು ಖ್ಯಾತರಾದ ಗೋಪಿಚಂದ್ ಹಿಂದುಜಾ ಅವರು 1950ರ ದಶಕದಲ್ಲಿ ಕುಟುಂಬ ವ್ಯವಹಾರಕ್ಕೆ ಸೇರಿದರು. ಇಂಡೋ-ಮಧ್ಯಪ್ರಾಚ್ಯ ವ್ಯಾಪಾರದಿಂದ ಕಂಪನಿಯನ್ನು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ರೂಪಿಸಿದ ಕೀರ್ತಿಗೆ ಅವರು ಪಾತ್ರರಾದರು.

ಬಾಂಬೆ ಜೈ ಹಿಂದ್ ಕಾಲೇಜಿನಲ್ಲಿ ಪದವಿ ಪಡೆದ ಅವರು, ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯ ಹಾಗೂ ರಿಚ್ಮಂಡ್ ಕಾಲೇಜುಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಹಿಂದುಜಾ ಗ್ರೂಪ್‌ವು ಆಟೋಮೊಬೈಲ್, ಬ್ಯಾಂಕಿಂಗ್, ಐಟಿ, ಆರೋಗ್ಯ, ರಿಯಲ್ ಎಸ್ಟೇಟ್, ವಿದ್ಯುತ್, ಮಾಧ್ಯಮ ಮತ್ತು ಮನರಂಜನೆ ಸೇರಿದಂತೆ ಹನ್ನೊಂದು ಪ್ರಮುಖ ವಲಯಗಳಲ್ಲಿ ವ್ಯವಹಾರ ನಡೆಸುತ್ತಿದೆ. ಅದರ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಅಶೋಕ್ ಲೇಲ್ಯಾಂಡ್, ಇಂಡಸ್‌ಇಂಡ್ ಬ್ಯಾಂಕ್, NXTDIGITAL ಲಿಮಿಟೆಡ್ ಸೇರಿವೆ.
2021ರಲ್ಲಿ ಹಿಂದುಜಾ ಕುಟುಂಬವು ಲಂಡನ್ ನ್ಯಾಯಾಲಯದ ಮೆಟ್ಟಿಲೇರಿದ್ದು ಸುದ್ದಿಯಾಗಿತ್ತು. ಅಂದು ಶ್ರೀಚಂದ್ ಹಿಂದುಜಾ ಅವರ ಪುತ್ರಿ ವಿನೂ ಮತ್ತು ಶಾನು, ತಮ್ಮ ಮೂವರು ಚಿಕ್ಕಪ್ಪಂದಿರು ಹಣಕಾಸು ನಿರ್ವಹಣೆಯಿಂದ ತಮ್ಮನ್ನು ಹೊರಗುಳಿಸಿದ್ದಾರೆಂದು ಆರೋಪಿಸಿದ್ದರು. ಆ ಸಮಯದಲ್ಲಿ ಶ್ರೀಚಂದ್ ಹಿಂದುಜಾ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು.



