ಲೋಕಾಯುಕ್ತ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಹಾಕಿದ ವ್ಯಕ್ತಿ ಬಲೆಗೆ

ರಾಮನಗರ : ಬೆಂಗಳೂರು ದಕ್ಷಿಣದ ಲೋಕಾಯುಕ್ತ  ಡಿವೈಎಸ್ಪಿ ಶಿವಪ್ರಸಾದ್ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆಮಾಡಿದ್ದ ಆರೋಪಿಯನ್ನು ರಾಮನಗರದ ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈಸಿಂಗ್‌ಪುರ್ ಗ್ರಾಮದಲ್ಲಿದ್ದ ಆರೋಪಿಯನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ.

ಲೋಕಾಯುಕ್ತರ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್​ಮೇಲ್

ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆಯಿಡುತ್ತಿದ್ದ ಮುರುಗಪ್ಪ ನಿಂಗಪ್ಪ ಕುಂಬಾರ ಇತ್ತೀಚಿಗೆ ಮಾಗಡಿಯ ಸಿಡಿಪಿಓ ಸುರೇಂದ್ರ, ಜಿಲ್ಲಾ ಸರ್ಜನ್ ಮಂಜುನಾಥ್​ಗೆ ಕರೆ ಮಾಡಿ ಅವರ ಬಳಿಯೂ ತಾನು ಲೋಕಾಯುಕ್ತ ಅಧಿಕಾರಿಯೆಂದು ಹೇಳಿಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ದ. ಈಗ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈಸಿಂಗ್‌ಪುರದಲ್ಲಿ ರಾಮನಗರದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಹಿಂದೆ ಲೋಕಾಯುಕ್ತದಲ್ಲಿ ಪೇದೆಯಾಗಿದ್ದ ಆರೋಪಿ

ಆರೋಪಿಯು ಈ ಹಿಂದೆ 17 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ. ಅಷ್ಟೇ ಅಲ್ಲದೇ ಲೋಕಾಯುಕ್ತದಲ್ಲಿಯೂ ಪೇದೆಯಾಗಿ ಕೆಲಸ ಮಾಡಿದ್ದ. ಆ ಸಮಯದಲ್ಲಿ ಆರೋಪಿಗಳಿಗೆ ನೀಡುವ ವಾರಂಟ್​ಗಳನ್ನು ಹಣಕ್ಕಾಗಿ ದುರ್ಬಳಕೆ ಮಾಡಿಕೊಂಡ ಕಾರಣ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಸೇವೆಯಿಂದ ವಜಾಗೊಂಡ ಬಳಿಕ ಇತರ ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪಡೆದು ಅವರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ. ಟ್ರೂ ಕಾಲರ್​ನಲ್ಲಿಯೂ ಲೋಕಾಯುಕ್ತ ಅಧಿಕಾರಿಯೆಂದೇ ನಮೂದಿಸಿಕೊಂಡಿದ್ದ. ಇದರಿಂದಾಗಿ ಇತರೆ ಸರ್ಕಾರಿ ಅಧಿಕಾರಿಗಳು ಆತನನ್ನು ನಂಬುತ್ತಿದ್ದರು. ಅಧಿಕಾರಿಗಳಿಗೆ ಕರೆ ಮಾಡಿ ಹಣ ಕೇಳುವುದಷ್ಟೇ ಅಲ್ಲದೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ತನ್ನ ಸ್ನೇಹಿತರ ಅಥವಾ ಪರಿಚಿತರ ಖಾತೆಗೆ ಹಣ ವರ್ಗಾಯಿಸಲು ಹೇಳಿ, ನಂತರ ಪರಿಚಿತರಿಂದ ತಾನು ಹಣ ಪಡೆಯುತ್ತಿದ್ದ.

ಬಂಧಿತ ಆರೋಪಿಯಿಂದ 3 ಮೊಬೈಲ್ 9ಕ್ಕೂ ಹೆಚ್ಚು ಸಿಮ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ಠಾಣೆ ಮೆಟ್ಟಿಲೇರಿರುವ  ಬಂಧಿತ ಆರೋಪಿಯ ಮೇಲೆ ರಾಜ್ಯದ 15 ಜಿಲ್ಲೆಗಳಲ್ಲಿ 56ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.