ಸರ್ಕಾರಿ ಟೆಲಿಕಾಂ ಸಂಸ್ಥೆ BSNL ಈಗ ತನ್ನ ಗ್ರಾಹಕರಿಗೂ eSIM ಸೌಲಭ್ಯವನ್ನು ನೀಡಲು ಆರಂಭಿಸಿದೆ. ಇದರ ಮೂಲಕ BSNL ಬಳಕೆದಾರರು ಭೌತಿಕ ಸಿಮ್ ಕಾರ್ಡ್ ಇಲ್ಲದೇ ಕರೆ ಮಾಡಲು ಹಾಗೂ ಇಂಟರ್ನೆಟ್ ಬಳಸಲು ಸಾಧ್ಯವಾಗಲಿದೆ.
ಇಲ್ಲಿಯವರೆಗೆ ಈ ಸೌಲಭ್ಯವನ್ನು ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಮುಂತಾದ ಖಾಸಗಿ ಟೆಲಿಕಾಂ ಸಂಸ್ಥೆಗಳ ಗ್ರಾಹಕರು ಮಾತ್ರ ಉಪಯೋಗಿಸುತ್ತಿದ್ದರು.

ಇಲ್ಲಿಯವರೆಗೆ ಭಾರತದಲ್ಲಿ eSIM ಸೌಲಭ್ಯವನ್ನು ಖಾಸಗಿ ಟೆಲಿಕಾಂ ಕಂಪನಿಗಳು ಮಾತ್ರ ಒದಗಿಸುತ್ತಿದ್ದರೆ, ಇದೀಗ ಬಿಎಸ್‌ಎನ್‌ಎಲ್ (BSNL) ಸಹ ಈ ಸೇವೆಯನ್ನು ಪ್ರಾರಂಭಿಸಿದೆ. ಭೌತಿಕ ಸಿಮ್‌ಗೆ ಒಂದೇ ಸ್ಲಾಟ್ ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಈಗ ಬಿಎಸ್‌ಎನ್‌ಎಲ್ ಅನ್ನು eSIM ರೂಪದಲ್ಲಿ ಬಳಸಬಹುದು. ಈ ಹೊಸ ಸೇವೆಯು ದೇಶದಾದ್ಯಂತ ಗ್ರಾಹಕರಿಗೆ ಹೆಚ್ಚು ಅನುಕೂಲತೆ ಮತ್ತು ಉತ್ತಮ ಸಂಪರ್ಕವನ್ನು ನೀಡಲಿದೆ.
ಈ ಯೋಜನೆಗಾಗಿ ಬಿಎಸ್‌ಎನ್‌ಎಲ್ ಟಾಟಾ ಕಮ್ಯುನಿಕೇಷನ್ಸ್‌ನೊಂದಿಗೆ ಸಹಕರಿಸಿದೆ. ಟಾಟಾ ಕಮ್ಯುನಿಕೇಷನ್ಸ್‌ನ “MOVE” ಪ್ಲಾಟ್‌ಫಾರ್ಮ್ ಮೂಲಕ eSIM ಚಂದಾದಾರಿಕೆ ನಿರ್ವಹಣೆ ನಡೆಯಲಿದೆ. ಈ ತಂತ್ರಜ್ಞಾನವು GSMA ಮಾನ್ಯತೆ ಪಡೆದಿದ್ದು, ಸಂಪೂರ್ಣ ಸುರಕ್ಷಿತವಾಗಿದೆ.
ಬಿಎಸ್‌ಎನ್‌ಎಲ್ (BSNL) ನ eSIM ಸೇವೆ 2G, 3G ಹಾಗೂ 4G ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಕೇವಲ ಒಂದು ಭೌತಿಕ ಸಿಮ್ ಸ್ಲಾಟ್ ಮತ್ತು eSIM ಸ್ಲಾಟ್ ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸೇವೆಯ ಪ್ರಯೋಜನ ಪಡೆಯಬಹುದು.

ಬಿಎಸ್‌ಎನ್‌ಎಲ್‌ನ ದೊಡ್ಡ ಸಾಧನೆ
“ಪ್ಯಾನ್-ಇಂಡಿಯಾ eSIM ಸೇವೆಯ ಪ್ರಾರಂಭವು ಭಾರತದ ದೂರಸಂಪರ್ಕ ಕ್ಷೇತ್ರವನ್ನು ಹೊಸ ಹಂತಕ್ಕೆ ಏರಿಸುತ್ತದೆ. ಟಾಟಾ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ಈ ಸೇವೆ ಅತ್ಯುತ್ತಮ ಗ್ರಾಹಕ ಅನುಭವವನ್ನು ಒದಗಿಸಿ, ಭಾರತದ ಡಿಜಿಟಲ್ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುತ್ತದೆ,” ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ. ರಾಬರ್ಟ್ ರವಿ ತಿಳಿಸಿದ್ದಾರೆ.
ಅದರ ಜೊತೆಗೆ, ವರ್ಷದ ಅಂತ್ಯದೊಳಗೆ ಬಿಎಸ್‌ಎನ್‌ಎಲ್ 5G ಸೇವೆ ಪ್ರಾರಂಭಿಸಲು ಸಿದ್ಧವಾಗುತ್ತಿದೆ ಎಂದು ವರದಿಗಳು ಸೂಚಿಸಿವೆ.
ಖಾಸಗಿ ಕಂಪನಿಗಳ ಸ್ಪರ್ಧೆಯನ್ನು ಎದುರಿಸಲು ಬಿಎಸ್‌ಎನ್‌ಎಲ್ ತನ್ನ ಸೇವೆಗಳನ್ನು ವೇಗವಾಗಿ ಆಧುನೀಕರಿಸುತ್ತಿದೆ. ವೈರ್‌ಲೆಸ್ ಸೇವೆಗಳಿಂದ ಹಿಡಿದು ಉಪಗ್ರಹ ಸಂಪರ್ಕದವರೆಗೆ, ಸಂಸ್ಥೆ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿದೆ. ಸರ್ಕಾರವು ಬಿಎಸ್‌ಎನ್‌ಎಲ್ 5G ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕೆಂದು ಬಯಸಿದೆ. ವರದಿಗಳ ಪ್ರಕಾರ, ಬಿಎಸ್‌ಎನ್‌ಎಲ್ ಈ ವರ್ಷದ ಅಂತ್ಯದೊಳಗೆ ಮುಂಬೈ ಮತ್ತು ದೆಹಲಿಯಲ್ಲಿ 5G ಸೇವೆ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.
ಸೆಪ್ಟೆಂಬರ್ 27ರಿಂದ ಬಿಎಸ್‌ಎನ್‌ಎಲ್ ದೇಶಾದ್ಯಂತ ಸುಮಾರು 98,000 ಟವರ್‌ಗಳ ಸಹಾಯದಿಂದ 4G ಸೇವೆ ಪ್ರಾರಂಭಿಸಿದೆ. ಆರಂಭಿಕ ಪರೀಕ್ಷೆಗಳಲ್ಲಿ ಬಿಎಸ್‌ಎನ್‌ಎಲ್ 4G ಉತ್ತಮ ಫಲಿತಾಂಶಗಳನ್ನು ತೋರಿಸಿದೆ.

