ಸಿದ್ದಾಪುರ: ಭಾರತವನ್ನು ಹಿಂದೆ ಈಸ್ಟ್ ಇಂಡಿಯಾ ಕಂಪನಿ ಆಳಿತ್ತು. ಪ್ರಸ್ತುತ ಆರ್.ಎಸ್.ಎಸ್ ಕಂಪನಿ ಸರ್ಕಾರ ನಮ್ಮನ್ನು ಆಳುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಈಶ್ವರ ವ್ಯಂಗ್ಯವಾಡಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪ್ರಸ್ತುತ ಆಡಳಿತ ನಡೆಸುತ್ತಿರುವುದು ಜನರ ಅಭಿಪ್ರಾಯದಿಂದ ಬಂದ ಸರ್ಕಾರವಲ್ಲ. ಶಾಸಕರನ್ನು ಖರೀದಿಸಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಅನೈತಿಕ ಸರ್ಕಾರ ಇದಾಗಿದೆ. ಭ್ರಷ್ಟತೆಯಿಂದ ತುಂಬಿದ ಸರ್ಕಾರದ ಕುರಿತು ಗುತ್ತಿಗೆದಾರರ ಸಂಘದವರು ಪ್ರಧಾನ ಮಂತ್ರಿಗೆ ಪತ್ರ ಬರೆಯುತ್ತಾರೆ. ಕಾನೂನು ಸಚಿವ ಮಾಧುಸ್ವಾಮಿಯವರೇ ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಕೂಡ ಅವ್ಯವಹಾರ ನಡೆಸಿದ ಸಚಿವರು ಸರ್ಕಾರದಲ್ಲಿದ್ದಾರೆ. ಅಮಾಯಕರ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ. ಕೇವಲ ಸಿದ್ದರಾಮಯ್ಯನವರಿಗೆ ಮಾಡಿದ ಅವಮಾನವಲ್ಲ. ರಾಜ್ಯದ ಸಮಸ್ತ ಹಿಂದುಗಳಿಗೆ ಮಾಡಿದ ಅಪಮಾನ. ಆರ್.ಎಸ್.ಎಸ್ ಹಿಂದಿನಿಂದ ಇದನೆಲ್ಲಾ ಮಾಡಿಸುತ್ತಿದೆ ಎಂದರು.
ಈ ವೇಳೆ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಉಪಾಧ್ಯಕ್ಷ ನಾಸೀರ್ ಖಾನ್, ಡಿಸಿಸಿ ಕಾರ್ಯದರ್ಶಿ ಸಿ.ಆರ್.ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುನಾವರ್ ಗುರಕಾರ್, ಪ್ರಮುಖರಾದ ರಾಜೇಂದ್ರ ಕಿಂದ್ರಿ, ಸುರೇಂದ್ರ ಗೌಡ ಉಪಸ್ಥಿತರಿದ್ದರು.