ಬೆಂಗಳೂರು, ಸೆ07: ಖ್ಯಾತ ವಾಗ್ಮಿ, ಚಿಂತಕ, ಅಂಕಣಕಾರ, ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ದೇವದಾಸ್ ಸುಬ್ರಾಯ ಶೇಟ್ ಅವರು ಅಲ್ಪಕಾಲದ ಅನಾರೋಗ್ಯ ಕಾರಣದಿಂದಾಗಿ ಇಂದು ನಿಧನರಾಗಿದ್ದಾರೆ. ದೇವದಾಸ್ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಬೋಧನೆ ಮಾಡಿದ್ದರು.

ತಮ್ಮ ತಂದೆಯ ನಿಧನದ ಕುರಿತಾಗಿ ಚಕ್ರವರ್ತಿ ಸೂಲಿಬೆಲೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ, “ಬದುಕಿನ ಪಯಣದಲ್ಲಿ ಶಾಶ್ವತವಾಗಿ ಯಾರೂ ಜೊತೆಗಿರಲಾರರು. ಆದರೆ ಕೆಲವರ ವಿಯೋಗ ಅನಿರೀಕ್ಷಿತ ಮತ್ತು ದುಃಖಮಯ. ಅಪ್ಪ ಇಂದು ಬೆಳಿಗ್ಗೆಯಷ್ಟೇ ಯಾತ್ರೆ ಮುಗಿಸಿ ಅಗಲಿದರು. ಕೆಲದಿನಗಳ ಶ್ವಾಸಕೋಶದ ಸಮಸ್ಯೆ ಅವರನ್ನು ಈ ಹಂತಕ್ಕೊಯ್ಯುವುದೆಂದು ನಾನೆಣಿಸಿರಲಿಲ್ಲ. ಅವರನ್ನು ಪ್ರೀತಿಸುವವರ ಬಹಳ ಮಂದಿ. ಎಲ್ಲರಿಗೂ ವಿಷಯ ಮುಟ್ಟಿಸುವುದು ಹೇಗೆ? ಅದಕ್ಕೇ ಇಲ್ಲಿ ಹಂಚಿಕೊಳ್ಳುತ್ತಿರುವೆ” ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ನಾಡಿನ ಹಲವು ಗಣ್ಯರು ದೇವದಾಸ್ ಶೇಟ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
