ಬ್ರಿಟನ್‌ನಲ್ಲಿ ವಿಮಾನ ಅಪಹರಣದ ನಕಲಿ ನಾಟಕ- ಹೊನ್ನಾವರದ ಅಭಯ ನಾಯಕ ಬಂಧನ!

ಸ್ಕಾಟ್ಲೆಂಡಿನ ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ನಡೆದ ಅಪರೂಪದ ಘಟನೆಯೊಂದರಲ್ಲಿ ಹೊನ್ನಾವರ ಮೂಲದ ವ್ಯಕ್ತಿ ಅಭಯ ದೇವದಾಸ ನಾಯಕ (34) ಅವರನ್ನು ಬಂಧಿಸಲಾಗಿದೆ. ಅಭಯ ಅವರು ಕಾರವಾರದವರು ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆಯಾದರೂ ಇವರು ಹೊನ್ನಾವರದವರು ಎಂದು ತಿಳಿದು ಬಂದಿದೆ.

ಲಂಡನ್‌ನ ಲೂಟನ್ ವಿಮಾನ ನಿಲ್ದಾಣದಿಂದ ಗ್ಲಾಸ್ಗೋಗೆ ತೆರಳುತ್ತಿದ್ದ ಈಸಿಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದ್ದು ವಿಮಾನದಲ್ಲಿ ಬಾಂಬ್ ಬೆದರಿಕೆ ಮತ್ತು ರಾಜಕೀಯ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಮಾನದೊಳಗೆ ಸಹಪ್ರಯಾಣಿಕರಿಗೆ ಮಾನಸಿಕವಾಗಿ ತೊಂದರೆ ಕೊಟ್ಟು, ಅವರಿಗೂ ಸಿಬ್ಬಂದಿಗೂ ಬೆದರಿಕೆ ಒಡ್ಡಿದ ಆರೋಪದ ಮೇಲೆ ಇವರನ್ನು ಸ್ಥಳೀಯ ಪೊಲೀಸ್ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ಅಭಯ ನಾಯಕ ಪ್ರಾರಂಭದಲ್ಲಿ ಭಾರತದಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ಮಾಡಿಕೊಂಡಿದ್ದು , ಕೆಲ ವರ್ಷಗಳ ಹಿಂದೆ ಹೆಚ್ಚಿನ ಅವಕಾಶದ ಆಶಯದಿಂದ ಲಂಡನ್‌ಗೆ ವಲಸೆ ಹೋಗಿದ್ದರು ಎನ್ನಲಾಗಿದೆ. ಅಲ್ಲಿಂದ ಸ್ಕಾಟ್ಲೆಂಡಿನ ಗ್ಲಾಸ್ಗೋ ನಗರದಲ್ಲಿ ನೆಲೆಸಿದ್ದು ಐಟಿ ಕ್ಷೇತ್ರದಲ್ಲಿ ಎಂಜಿನಿಯರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಗಳ ಪ್ರಕಾರ ಅವರು ಸದಾ ಮೌನವಾಗಿರುತ್ತಿದ್ದರಲ್ಲದೇ ಬೇರೆಯವರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎನ್ನಲಾಗಿದೆ.

ಜುಲೈ 30ರಂದು ದೆಹಲಿಯಿಂದ ಲಂಡನ್ ಮೂಲಕ ಗ್ಲಾಸ್ಗೋಗೆ ಹೊರಟಿದ್ದ ವಿಮಾನದಲ್ಲಿ ನಡೆದ ಅಭಯ ಅವರ ವರ್ತನೆ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತು. ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ವಿಮಾನ ಹಾರಾಟದಲ್ಲಿರುವ ಸಮಯದಲ್ಲಿ ಅಭಯ ನಾಯಕ ಅವರು ಅನಿಯಂತ್ರಿತವಾಗಿ ಕೂಗಾಡಲಾರಂಭಿಸಿದರು ಎಂದು ಅಲ್ಲಿನ ಪೋಲಿಸರು ತಿಳಿಸಿದ್ದಾರೆ.  ಕೆಲವೊಮ್ಮೆ ಇತರ ಪ್ರಯಾಣಿಕರತ್ತ  ವ್ಯಾಘ್ರವಾಗಿ ವರ್ತಿಸಿದರೆ ಇನ್ನೊಮ್ಮೆ ಬೆದರಿಕೆ ಒಡ್ಡುವಂತೆ  ಮಾತನಾಡಿದರೆಂದು ತಿಳಿದುಬಂದಿದೆ.

ಕ್ಯಾಬಿನ್ ಸಿಬ್ಬಂದಿಯ ವಿರೋಧವನ್ನೂ   ಲೆಕ್ಕಿಸದೆ, ತಾನೊಬ್ಬ ‘ದೇವದೂತ’ ಎಂದು ಕೂಗುತ್ತಿದ್ದ ಅಭಯ  ‘ನೀವೆಲ್ಲ  ನಾಶವಾಗುತ್ತಿದ್ದೀರಿ, ನಿಮ್ಮನ್ನು ನಾನು ರಕ್ಷಿಸುತ್ತೇನೆ’ ಎಂದು ಹೇಳಿದರಿಂದ  ಅಭಯ ಅವರು ವಿಮಾನವನ್ನು ಅಪಹರಿಸಿದ್ದಾರೆ ಎಂದು ಭಾವಿಸಿದ  ಸಹಪ್ರಯಾಣಿಕರಲ್ಲಿ ಗೊಂದಲ, ಭಯ, ಆತಂಕ ಉಂಟಾದ ಹಿನ್ನೆಲೆಯಲ್ಲಿ, ವಿಮಾನವನ್ನು ಸುರಕ್ಷಿತವಾಗಿ ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಪಡೆಗಳು ಅವರನ್ನು ಸುತ್ತುವರಿದು ಬಂಧಿಸಿದರು ಎನ್ನಲಾಗಿದೆ.  

ಗ್ಲಾಸ್ಗೋ ಸಿಟಿ ಪೊಲೀಸ್‌ರು ತಮ್ಮ  ಹೇಳಿಕೆಯಲ್ಲಿ, “ಅಭಯ ನಾಯಕ ಎಂಬ 34 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ಕಾರಣದಿಂದ ಬಂಧಿಸಲಾಗಿದೆ. ವೈದ್ಯಕೀಯ ಮತ್ತು ಮಾನಸಿಕ ತಪಾಸಣೆಗೆ ಅವರಿಗೆ ಒಳಪಡಿಸಲಾಗಿದೆ. ಅವರ ಮೇಲೆ ವಿಮಾನ ವ್ಯವಸ್ಥೆಗೆ ತೊಂದರೆ ಉಂಟುಮಾಡಿದ ಪ್ರಕರಣದಡಿಯಲ್ಲಿ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದೆ.

ಘಟನೆಯ ವಿಡಿಯೋ ಮತ್ತು ಸಾಕ್ಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಹಲವರು ಅಭಯ ಅವರ ಬಗ್ಗೆ ಕರುಣೆಯ ಮಾತನಾಡುತ್ತಿದ್ದಾರೆ. . ಕೆಲವರು ಅಭಯ ನಾಯಕನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇರಬಹುದು ಎಂಬ ಹೇಳಿದರೆ  ಇನ್ನಷ್ಟು ಮಂದಿ ಈ ರೀತಿಯ ಅಹಿತಕರ ಘಟನೆಗೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.