ಬೆಂಗಳೂರು, ಸೆಪ್ಟೆಂಬರ್ 07: ಮಗ ಕಾಣೆಯಾದನೆಂದು ಸುಳ್ಳು ಪ್ರಕರಣ ದಾಖಲಿಸಿದ್ದ ತಾಯಿ ಮಹೇಶ್ವರಿಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. ದಂಡವನ್ನು ಎರಡು ವಾರಗಳಲ್ಲಿ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ. ಇಂದಿರಾನಗರದ ನಿವಾಸಿಯಾಗಿರುವ ಮಹೇಶ್ವರಿ, ಪೊಲೀಸರ ಮೇಲಿನ ಅಸಮಾಧಾನದ ಕಾರಣಕ್ಕೆ ತಮ್ಮ ಮಗ ಕೃಪಲಾನಿ ಕಾಣೆಯಾಗಿದ್ದಾನೆ ಎಂದು ತಪ್ಪು ದೂರನ್ನು ನೀಡಿದ್ದರೆಂದು ನ್ಯಾಯಾಲಯ ತಿಳಿಸಿದೆ.

ನಡೆದದ್ದೇನು?
ಪಕ್ಕದ ಮನೆಯವರು ರಾತ್ರಿ ಗದ್ದಲ ಮಾಡುತ್ತಾರೆ, ಗಾಂಜಾ ಮಾರಾಟ ನಡೆಸುತ್ತಾರೆ ಎಂದು ಕೃಪಲಾನಿ ದೂರು ನೀಡಿದ್ದ. ಈ ಆಧಾರದ ಮೇಲೆ ಇಂದಿರಾನಗರ ಪೊಲೀಸರು ಎನ್‌ಸಿಆರ್ ದಾಖಲಿಸಿ ತನಿಖೆ ಆರಂಭಿಸಿದರು. ಆದರೆ ಪರಿಶೀಲನೆ ನಡೆಸಿದಾಗ ಪ್ರಕರಣ ಸಂಪೂರ್ಣ ಸುಳ್ಳು ಎಂಬುದು ಬಹಿರಂಗವಾಯಿತು.
ನಂತರ ಕೃಪಲಾನಿ ಇನ್ಸ್ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಕೃಪಲಾನಿ ದೂರು ನೀಡಿದ್ದ. ಅಲ್ಲದೇ ಇನ್ಸ್ಪೆಕ್ಟರ್ ಮೇಲಿನ ಸಿಟ್ಟಿಗೆ ತಾಯಿ ಮಹೇಶ್ವರಿಯಿಂದ ನನ್ನ ಮಗ ಕಾಣೆಯಾಗಿದ್ದಾನೆಂದು ಹೈಕೋರ್ಟ್ಗೆ ಹೆಬಿಯಸ್ ಕಾರ್ಪಸ್ ಹಾಕಿಸಿದ್ದ. ಪೊಲೀಸ್ ಠಾಣೆಗೆ ಹೋದವನು ವಾಪಸ್ ಬಂದಿಲ್ಲ ಎಂದು ತಾಯಿ ದೂರಿದ್ದರು.
ಇತ್ತ ಮಗ ಕೃಪಲಾನಿ ದೂರು ನೀಡಿ ಚೆನ್ನೈನ ಮ್ಯಾರಿಯೆಟ್ ಹೋಟೆಲ್ನಲ್ಲಿದ್ದ. ಸಿಡಿಆರ್ ತೆಗೆಸಿದ ಪೊಲೀಸರಿಗೆ ತಾಯಿ ಜೊತೆ ಮಗ ಸಂಪರ್ಕದಲ್ಲಿರೋದು ಪತ್ತೆ ಆಗಿತ್ತು. ಬಳಿಕ ಪೊಲೀಸರು ಚೆನ್ನೈನಿಂದ ಕೃಪಲಾನಿ ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಇನ್ಸ್ಪೆಕ್ಟರ್ ಸಿಲುಕಿಸಲು ಸುಳ್ಳು ಕೇಸ್ ಹಾಕಿಸಿದ್ದ ಬಗ್ಗೆ ಪೊಲೀಸರು ದಾಖಲೆ ಸಲ್ಲಿಸಿದ್ದರು.
ಹೀಗಾಗಿ ದೂರು ನೀಡಿದ್ದ ಮಹೇಶ್ವರಿಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. 2 ಲಕ್ಷ ರೂ ಪೈಕಿ 1 ಲಕ್ಷ ರೂ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ 1 ಲಕ್ಷ ರೂ ಪೊಲೀಸ್ ಕಲ್ಯಾಣ ನಿಧಿಗೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.
