ಚಾಮರಾಜನಗರ, ಸೆಪ್ಟೆಂಬರ್ 07: ಚಾಮರಾಜನಗರದ ಗಾಳಿಪುರ ಬೈಪಾಸ್‌ನಲ್ಲಿ ಶನಿವಾರ ಲಾರಿ, ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಬಾಲಕರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಮೆರಾನ್, ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸರಣಿ ಅಪಘಾತದಲ್ಲಿ 10 ವರ್ಷದ ಮೆರಾನ್ ನಿನ್ನೆ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಇಂದು ಆಸ್ಪತ್ರೆಗೆ ತುತ್ತಾದರು.
ನಡೆದದ್ದೇನು?
ಈದ್ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಕ್ಕಳು ನಮಾಜ್ ಮಾಡಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದರು. ಶನಿವಾರ ರಜೆ ಇದ್ದುದರಿಂದ ಶಾಲೆಗೆ ಹೋಗಿರಲಿಲ್ಲ. “ಸೋಮವಾರದಿಂದ ಶಾಲೆಗೆ ಹೋಗೋಣ” ಎಂದು ಮೆರಾನ್, ಆತನ ಸಹೋದರ ಹಾಗೂ ಇಬ್ಬರು ಸ್ನೇಹಿತರು ನಿರ್ಧರಿಸಿದ್ದರು. ಆದರೆ ಆ ಕ್ಷಣವೇ ಅವರ ಕೊನೆಯ ದಿನವಾಗಿಬಿಟ್ಟಿತು.
ಒಟ್ಟು ನಾಲ್ವರು ಟಿವಿಎಸ್ ಎಕ್ಸ್ ಎಲ್ ಬೈಕ್ ತೆಗೆದುಕೊಂಡು ಗಾಳಿಪುರದ ಬಳಿ ಇರುವ ಔಟರ್ ರಿಂಗ್ ರಸ್ತೆಗೆ ಬಂದಿದ್ದು, ಹೈವೆಯಲ್ಲಿ ವೇಗವಾಗಿ ಬರ್ತಾಯಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರು. ಬೈಕ್ ಹಿಂದೆಯೇ ಇದ್ದ ಕಾರು ಕೂಡ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ನಾಲ್ವರು ಸಹ ಹೆಲ್ಮೆಟ್ ಹಾಕಿರ್ಲಿಲ್ಲ, ಪರಿಣಾಮ ನಾಲ್ವರಿಗೂ ಹೆಡ್ ಇಂಜ್ಯುರಿಯಾಗಿ ಮೃತಪಟ್ಟಿದ್ದಾರೆ.
ಅದೇನೆ ಹೇಳಿ ಅಪ್ರಾಪ್ತರ ಕೈಗೆ ಬೈಕ್ ನೀಡಿದ್ದು ಪೋಷಕರ ತಪ್ಪು. ಇತ್ತ ಒಂದೇ ಬೈಕ್ನಲ್ಲಿ ಹುಡುಗಾಟ ಆಡಲು ಹೋಗಿ ಈಗ ನಾಲ್ಕು ಜೀವಗಳು ಬಲಿಯಾಗಿದ್ದು ಮಾತ್ರ ದುರಂತವೇ ಸರಿ.
