ದ್ವಿಚಕ್ರ ವಾಹನ ಮತ್ತು ಫಾರ್ಚುನರ್‌ ಕಾರು ಮುಖಾಮುಖಿ ಡಿಕ್ಕಿ; ಯುವತಿಯ ಸಾವು

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಯುವತಿ ಸಾವನ್ನಪ್ಪಿದ ಘಟನೆ ಬಾಗಲೂರು ರಸ್ತೆಯ ಕೆಐಎಡಿಬಿ ಜಂಕ್ಷನ್‌ನಲ್ಲಿ ನಡೆದಿದೆ.

ನಂದಿನಿ(24) ಮೃತ ಯುವತಿ. ನೆಲಮಂಗಲದ ಹುಸ್ಕೂರು ಗ್ರಾಮದ ನಂದಿನಿ ಏರೋನಾಟಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ಸೇರಿದ ಬಳಿಕ ಬಾಗಲೂರಿನ ಪಿಜಿಯಲ್ಲಿ ವಾಸವಾಗಿದ್ದರು

ಗುರುವಾರ ಸಂಜೆ 6:30ಕ್ಕೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಪಿಜಿಗೆ ಹಿಂದಿರುಗುವಾಗ ಫಾರ್ಚೂನರ್ ಕಾರು ಗುದ್ದಿದೆ. ಅಪಘಾತದ ರಭಸಕ್ಕೆ ನಂದಿನಿ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತೀವ್ರ ರಕ್ತಸ್ರಾವವಾಗಿ ನಂದಿನಿ ಸಾವನ್ನಪ್ಪಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಫಾರ್ಚುನರ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.