ಬೆಂಗಳೂರು; ತಡರಾತ್ರಿ ಲಾಂಗ್​ ಡ್ರೈವ್​ ಹೋಗಿದ್ದ ಮೂವರು ವಿದ್ಯಾರ್ಥಿಗಳು ಹಿಟ್​ ಆ್ಯಂಡ್ ರನ್​ಗೆ ಬಲಿ

ಬೆಂಗಳೂರು, ಸೆ.12: ಬೆಂಗಳೂರಲ್ಲಿ ಹಿಟ್​ & ರನ್​ಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಚಿಕ್ಕಜಾಲ ಬಳಿಯ ಕೆಂಪೇಗೌಡ ಏರ್​​ಪೋರ್ಟ್​ ರಸ್ತೆಯಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೂವರು ಯುವಕರು ಬೈಕ್​ನಲ್ಲಿ ಲಾಂಗ್​ ಡ್ರೈವ್​ ಹೋಗಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೋಹಿತ್​​(22), ಸುಚಿತ್(22), ಹರ್ಷ(22) ಮೃತ ವಿದ್ಯಾರ್ಥಿಗಳು.

ಮೃತ ಮೂವರು GKVKನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಭೀಕರತೆಗೆ ಹೆದ್ದಾರಿಯಲ್ಲಿ ನಜ್ಜು ಗುಜ್ಜಾದ ಸ್ಥಿತಿಯಲ್ಲಿ ಮೃತ ದೇಹಗಳು ಚಲ್ಲಾಪಿಲ್ಲಿಯಾಗಿವೆ. ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಮೃತದೇಹಗಳು ಅಂಬೇಡ್ಕರ್​​​ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.