ಸರ್ಜಾಪುರದಲ್ಲಿ ಎದೆ ಝುಲ್‌ ಎನ್ನುವ ಡೆಡ್ಲಿ ಆ್ಯಕ್ಸಿಡೆಂಟ್‌; ಬೈಕ್‌ ಸವಾರ ಬದುಕಿದ್ದೆ ಪವಾಡ

ಬೆಂಗಳೂರು: ಅಬ್ಬಾ.. ಬೆಂಗಳೂರಿನ ಸರ್ಜಾಪುರದಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ವೊಂದು ಸಂಭವಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶರವೇಗದಲ್ಲಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ಗಾಳಿಗೆ ತೂರಿ ಹಾರಿ ಬಿದ್ದಿದ್ದಾನೆ.

ಕಾರು ಬೈಕ್‌ಗೆ ಡಿಕ್ಕಿಯಾದರೂ ಪವಾಡ ಸದೃಶ್ಯ ರೀತಿ ಬೈಕ್‌ ಸವಾರ ಬಚಾವಾಗಿದ್ದಾನೆ. ಅದೃಷ್ಟವಶಾತ್ ಸವಾರ ಸಣ್ಣ-ಪುಟ್ಟ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ.

ಕಾರು ಡಿಕ್ಕಿಯಾದ ರಭಸಕ್ಕೆ ಸವಾರ ಬೈಕ್ ಸಮೇತ ರಸ್ತೆಗೆ ಹಾರಿ ಬಿದ್ದರೆ, ಧರಿಸಿದ್ದ ಹೆಲ್ಮೆಟ್ ಒಂದು ಕಡೆ ಎಗರಿ ಬಿದ್ದಿದೆ. ಅಪಘಾತದ ದೃಶ್ಯ ಮುಂದಿದ್ದ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಗಸ್ಟ್‌ 15ರ ಬೆಳಗ್ಗೆ 7:50 ರ ಸುಮಾರಿಗೆ ಸರ್ಜಾಪುರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್‌ ಸಂಪೂರ್ಣ ಜಖಂಗೊಂಡಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.