ಹೆಬ್ಬಾಳ ಫ್ಲೈಓವರ್​ ಮೇಲೆ ಸರಣಿ ಅಪಘಾತ; ಬಿಎಂಟಿಸಿ ಬಸ್​ ಚಾಲಕನ ಯಡವಟ್ಟಿನಿಂದ ಘೋರ ದುರಂತ

ಬೆಂಗಳೂರು, ಆಗಸ್ಟ್​.13: ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡ್ತಿದ್ದ ಬಿಎಂಟಿಸಿ ವೋಲ್ವೋ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು ಬೈಕ್ ಹಾಗೂ ಕಾರುಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸರಣಿ ಅಪಘಾತಗಳು ಸಂಭವಿಸಿದ್ದು ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಅಪಘಾತ ದೃಶ್ಯ ಬಸ್​ನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಿನ್ನೆ ಬೆಳಗ್ಗೆ 9.25 ಗಂಟೆ ಸುಮಾರಿಗೆ ಹೆಬ್ಬಾಳ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏರ್​ಪೋರ್ಟ್​​ನಿಂದ ಹೆಚ್ಎಸ್ಆರ್ ಲೇಔಟ್ ಕಡೆ ಸಾಗುತ್ತಿದ್ದ KA57F-1794 ನಂಬರ್​ನ ಬಿಎಂಟಿಸಿ ವೋಲ್ವೋ ಬಸ್​ನಿಂದ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಬೈಕ್​ಗಳು ಹಾಗೂ 4 ಕಾರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ. ಚೂರು ಹೆಚ್ಚು ಕಮ್ಮಿ ಆಗಿದ್ರೆ ಹತ್ತಾರು ವಾಹನ ಸವಾರರ ಪ್ರಾಣ ಹೋಗುತ್ತಿತ್ತು. ಅಪಘಾತದ ವಿಡಿಯೋ ಬೆಚ್ಚಿಬೀಳಿಸುವಂತಿದೆ.