ಕೋಲ್ಕತ್ತಾ: ಕಸ್ಬಾ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತ ಮೂವರಲ್ಲಿ ಇಬ್ಬರು ವಿದ್ಯಾರ್ಥಿಗಳು, ಮತ್ತೊಬ್ಬ ಮಾಜಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಬುಧವಾರ ಸಂಜೆ ಕಾಲೇಜು ಆವರಣದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಆರೋಪಿಸಿ ದೂರು ನೀಡಿದ್ದರು. ದೂರಿನನ್ವಯ ಕಸ್ಬಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಕರಣದಲ್ಲಿ 31 ವರ್ಷದ ಮೊನೊಜಿತ್ ಮಿಶ್ರಾ (ಕಾಲೇಜಿನ ಮಾಜಿ ಘಟಕದ ಅಧ್ಯಕ್ಷ, ಹಾಲಿ ಟಿಎಂಸಿ ನಾಯಕ), 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖೋಪಾಧ್ಯಾಯನನ್ನು ಬಂಧಿಸಲಾಗಿದೆ.
ಜೂನ್ 26 ರ ಸಂಜೆ ಕೋಲ್ಕತ್ತಾದ ತಲ್ಬಗನ್ ಕ್ರಾಸಿಂಗ್ ಬಳಿಯ ಸಿದ್ಧಾರ್ಥ ಶಂಕರ್ ಶಿಶು ರಾಯ್ ಉದ್ಯಾನ್ ಎದುರುಗಡೆಯಿಂದ ಮೊನೊಜಿತ್ ಮತ್ತು ಅಹ್ಮದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಬಂಧನದ ಸಮಯದಲ್ಲಿ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜೂನ್ 27 ರಂದು ಬೆಳಗ್ಗೆ 12:30 ಕ್ಕೆ ಮೂರನೇ ಆರೋಪಿ ಪ್ರಮಿತ್‌ನನ್ನು ಆತನ ಮನೆಯಿಂದ ಬಂಧಿಸಲಾಯಿತು. ಆತನ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಲಯವು ಜುಲೈ 1 ರ ಮಂಗಳವಾರದವರೆಗೆ ಪೊಲೀಸ್ ಕಸ್ಟಡಿ ನೀಡಿದೆ.
ಜೂನ್ 25 ರ ಸಂಜೆ ವಿದ್ಯಾರ್ಥಿನಿ ಕಾಲೇಜಿಗೆ ಹೋಗಿದ್ದಾಗ ಮೂವರು ಆರೋಪಿಗಳು ಆಕೆಯನ್ನು ಸಂಸ್ಥೆಯೊಳಗಿನ ಕೋಣೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಕಸ್ಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವು ಪ್ರಸ್ತುತ ಪ್ರಾಥಮಿಕ ಹಂತದಲ್ಲಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಅವರು ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಿಎನ್‌ಎಸ್‌ಸಸ್ ನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ತಕ್ಷಣದ, ಕಾಲಮಿತಿಯ ತನಿಖೆಗೆ ನಿರ್ದೇಶಿಸಿದ್ದಾರೆ. ಬಿಎನ್‌ಎಸ್‌ಸಸ್ ನ ಸೆಕ್ಷನ್ 396 ರ ಅಡಿಯಲ್ಲಿ ಪರಿಹಾರದ ಜೊತೆಗೆ ಸಂತ್ರಸ್ತೆಗೆ ಸಂಪೂರ್ಣ ವೈದ್ಯಕೀಯ, ಮಾನಸಿಕ ಮತ್ತು ಕಾನೂನು ನೆರವು ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಆಯೋಗವು 3 ದಿನಗಳಲ್ಲಿ ವಿವರವಾದ ಕ್ರಮ ಕೈಗೊಂಡ ವರದಿಯನ್ನು ಕೋರಿದೆ.
