“ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ”

ಶಿಮ್ಲಾ: ಹಿಮಾಚಲ ಪ್ರದೇಶದ ಐದು ಸ್ಥಳಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಪ್ರವಾಹದಲ್ಲಿ ಇದುವರೆಗೆ 7 ಮಂದಿ ಮೃತಪಟ್ಟಿದ್ದು, ಇನ್ನೂ ಕೆಲವರು ಕಾಣೆಯಾಗಿದ್ದಾರೆ.

ಈ ಪ್ರವಾಹದಿಂದಾಗಿ ಧರ್ಮಶಾಲಾ ಮತ್ತು ಕುಲ್ಲು ಪ್ರದೇಶದ ಆರು ಜನರು ಕಾಣೆಯಾಗಿದ್ದಾರೆ. ಈಗಾಗಲೇ ಮನುನಿ ಖಾದ್‌ನಲ್ಲಿ ಕೊಚ್ಚಿ ಹೋಗಿದ್ದ ಓರ್ವ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಇನ್ನುಳಿದವರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ತಂಡಗಳು ಹಾಗೂ ಸ್ಥಳೀಯರು ಶೋಧಕಾರ್ಯ ಮುಂದುವರೆಸಿದ್ದಾರೆ.

ಈ ಕುರಿತು ಹಿಮಾಚಲದ ಜಿಲ್ಲಾಧಿಕಾರಿ ಕಾಂಗ್ರಾ ಶಿಲ್ಪಿ ಬೆಕ್ತಾ ಮಾತನಾಡಿ, ಸದ್ಯ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಪತ್ತೆಹಚ್ಚುವುದು ನಮ್ಮ ಮುಖ್ಯ ಗುರಿಯಾಗಿದೆ. ಹೀಗಾಗಿ ಸ್ಥಳದಲ್ಲಿ ಹಿಮಾಚಲ ಪ್ರದೇಶ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ನ 50 ಸದಸ್ಯರ ತಂಡ ಸ್ಥಳದಲ್ಲಿದೆ. ಗೃಹರಕ್ಷಕ ದಳದ ತಂಡವನ್ನು ನಿಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಮೇಘಸ್ಫೋಟದಿಂದಾಗಿ ಅಲ್ಲಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದ್ದು, ಕುಲ್ಲುವಿನ ಸೈನ್ಜ್ನಲ್ಲಿ ಕೊಚ್ಚಿಹೋದ ಕುಟುಂಬದ ಮೂವರು ಸದಸ್ಯರು ಕಾಣೆಯಾಗಿದ್ದಾರೆ. ಇನ್ನೂ ತೀರ್ಥನ್ ನದಿಯಲ್ಲಿ ಓರ್ವ ವ್ಯಕ್ತಿ ಕೊಚ್ಚಿಹೋಗಿದ್ದಾನೆ. ಜೊತೆಗೆ ಮಂಡಿಯ ಧರಂಪುರದ ಜಲ್ಪಾ ದೇವಸ್ಥಾನದ ಬಳಿಯ ಬಿಯಾಸ್ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಭೂಸಿತದಿಂದಾಗಿ ಸೈನ್ಜ್‌ನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಬುಧವಾರ ಮೇಘಸ್ಫೋಟದಿಂದಾಗಿ ಖಾನಿಯಾರಾದ ಮನುನಿ ಖಾದ್‌ನಲ್ಲಿ ಉಂಟಾದ ಪ್ರವಾಹದ ನಡುವೆ ಸೋಕ್ನಿ ಡಾ ಕೋಟ್‌ನಲ್ಲಿರುವ ಖಾಸಗಿ ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ಜನರು ನಾಪತ್ತೆಯಾಗಿದ್ದಾರೆ ಮತ್ತೊಂದೆಡೆ, ಕುಲ್ಲುವಿನ ಸೈನ್ಜ್ನ ಜಿವಾನಾಲಾದಲ್ಲಿ ಮೇಘಸ್ಫೋಟದಿಂದಾಗಿ ನಂದ್ ಲಾಲ್ (72), ಮಗಳು ಮೂರ್ತಿ ದೇವಿ (15) ಮತ್ತು ಸಹೋದರಿ (67) ಯಾನ್ ದಾಸಿ ಕಾಣೆಯಾಗಿದ್ದಾರೆ.

ಜೂ.29 ರಂದು ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ ಜೂ.28ರಿಂದ 30ರವರೆಗೆ ಮತ್ತು ಜು.1ರಿಂದ 3ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಗುರುವಾರ ರಾತ್ರಿ, ಪಾಂಡೋಹ್‌ನಲ್ಲಿ 139.0 ಮಿ.ಮೀ, ಜೋಗಿಂದರ್ ನಗರದಲ್ಲಿ 73.0 ಮಿ.ಮೀ, ಶಿಲಾರುವಿನಲ್ಲಿ 54.0 ಮಿ.ಮೀ, ಕಟೋಲಾದಲ್ಲಿ 45.2 ಮಿ.ಮೀ, ಸುಜನ್‌ಪುರ್ ತಿಹ್ರಾದಲ್ಲಿ 42.0 ಮಿ.ಮೀ, ಬೈಜ್‌ನಾಥ್‌ನಲ್ಲಿ 32.0 ಮಿ.ಮೀ, ರೋಹ್ರುವಿನಲ್ಲಿ 30.0 ಮಿ.ಮೀ, ಮಂಡಿಯಲ್ಲಿ 29.4 ಮಿ.ಮೀ, ನಿಚಾರ್‌ನಲ್ಲಿ 25.0 ಮಿ.ಮೀ, ಬಂಜಾರ್‌ನಲ್ಲಿ 24.0 ಮಿ.ಮೀ, ಮತ್ತು ಕರ್ಸೋಗ್‌ನಲ್ಲಿ 21.0 ಮಿ.ಮೀ ಮಳೆ ದಾಖಲಾಗಿದೆ.