
ಬೆಂಗಳೂರಿನ ಸಿಟಿ ಮಾರ್ಕೆಟ್ ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರು: ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ ಮೈಸೂರು ರಸ್ತೆಯ ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ನಡೆದಿದೆ. ಆಕಾಶ್ ಹಾಗೂ ಅಫ್ಜಲ್ ಎಂಬಿಬ್ಬರು ಮೃತಪಟ್ಟಿದ್ದಾರೆ.
ಕೆ.ಪಿ.ಅಗ್ರಹಾರ ನಿವಾಸಿಯಾಗಿದ್ದ ಆಕಾಶ್ ಗ್ರೈಂಡರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳೂರಿನ ಅಫ್ಜಲ್, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದರು.
ಏನಾಯ್ತು?: ತಡರಾತ್ರಿ ಸ್ನೇಹಿತ ಮಣಿ ಜೊತೆ ಊಟಕ್ಕೆಂದು ಬಂದಿದ್ದ ಆಕಾಶ್, ದ್ವಿಚಕ್ರ ವಾಹನದಲ್ಲಿ ವಾಪಸ್ ತೆರಳುವಾಗ ಹಿಂಬದಿಯಿಂದ ಬಂದ ಅಫ್ಜಲ್‌ನ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ನೆಲಕ್ಕೆ ಬಿದ್ದಿದ್ದು, ಮುಖ ಹಾಗೂ ತಲೆಗೆ ತೀವ್ರ ಗಾಯವಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
