ಹಾರಂಗಿ ಬಹುತೇಕ ಭರ್ತಿ : ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಾಂತ್ಯದಲ್ಲಿ ಹೆಚ್ಚು ಪ್ರಮಾಣದ ನೀರು ಸಂಗ್ರಹ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗುವತ್ತ ಸಾಗಿದೆ. ಅಣೆಕಟ್ಟು ಭರ್ತಿಯಾಗಲು 13 ಅಡಿಯಷ್ಟು ಬಾಕಿ ಉಳಿದಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಮೇ ಅಂತ್ಯದಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ.

ನಿರಂತರ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಎಲ್ಲೆಡೆ ಸಾಧಾರಣ ಮಳೆ ಮುಂದುವರಿದಿದೆ. ಜೊತೆಗೆ ಆಗೊಮ್ಮೆ ಈಗೊಮ್ಮೆ ಧಾರಾಕಾರವಾಗಿ ಮಳೆಯಾ ಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆ ಜಲಾಶಯಕ್ಕೆ 2,000 ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ಸಾಮಾನ್ಯವಾಗಿ ಹಾರಂಗಿ ಜಲಾಶಯ ಭರ್ತಿಯಾಗುವುದು, ನೀರು ಬಿಡುಗಡೆಯಾಗುವುದು ಆಗಸ್ಟ್ ತಿಂಗಳಿನಲ್ಲಿ. ಒಮ್ಮೊಮ್ಮೆ ಹೆಚ್ಚು ಮಳೆಯಿದ್ದಾಗ ಜುಲೈ ತಿಂಗಳಾಂತ್ಯದಲ್ಲಿ ಭರ್ತಿಯಾಗುತ್ತದೆ. ಜೂನ್‌ನಲ್ಲಿ ಜಲಾಶಯ ಭರ್ತಿಯಾಗಿರುವುದೇ ಅಪರೂಪ. ಆದರೆ, ಈ ಬಾರಿ ಮೇ ತಿಂಗಳಾಂತ್ಯದಲ್ಲಿಯೇ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇನ್ನು 4-5 ಅಡಿಗಳು ತುಂಬುತ್ತಿದ್ದಂತೆ ಜಲಾಶಯದಿಂದ ನೀರು ಬಿಡುಗಡೆ ಮಾಡ ಲಾಗುತ್ತದೆ

ಮಳೆ ಹೀಗೆಯೇ ಮುಂದುವರಿದರೆ ಇಂದು ಅಥವಾ ಬುಧವಾರ ಹಾರಂಗಿ ಜಲಾಶಯದ ಕ್ರಸ್ಟ್ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ನದಿ ಪಾತ್ರದ ಜನರು ತಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ಹಾರಂಗಿ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.