ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಭದ್ರತೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಟ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿತು.

ಬೆಂಗಳೂರು: ನೀವು ಕಮಲ್ ಹಾಸನ್ ಆಗಿರಬಹುದು. ಬಹುಜನರ ಭಾವನೆಗಳನ್ನು ನೋಯಿಸುವುದಕ್ಕೆ ಅವಕಾಶವಿಲ್ಲ ಎಂದು ತಮಿಳು ಭಾಷೆಯಿಂದಲೇ ಕನ್ನಡ ಭಾಷೆ ಜನ್ಮ ತಾಳಿದೆ ಎಂಬುದಾಗಿ ಹೇಳಲು ನೀವು ಭಾಷಾ ತಜ್ಞರೇ ಎಂದು ಪ್ರಶ್ನಿಸಿರುವ ಹೈಕೋರ್ಟ್, ಮೌಖಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಿದೆ.
ಥಗ್ ಲೈಫ್ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ನಾರಾಯಣ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಈ ಸೂಚನೆ ನೀಡಿದೆ.
ಅಲ್ಲದೆ, ಥಗ್ ಲೈಫ್ ಚಿತ್ರ ನಿರ್ಮಾಣ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲರು, ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿ ಥಗ್ ಲೈಫ್ ಚಿತ್ರದ ಬಿಡುಗಡೆಗೆ ನಿಷೇಧ ವಿಧಿಸಲಾಗಿದೆ. ಇಡೀ ಹೇಳಿಕೆಯನ್ನು ನಾನು ನೋಡಿದ್ದೇನೆ. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಮಲ್ ನೀಡಿರುವ ಹೇಳಿಕೆಯನ್ನು ವ್ಯಾಪ್ತಿ ಮೀರಿ ಅರ್ಥೈಸಿಕೊಂಡು ಕನ್ನಡದ ವಿರುದ್ಧ ಏನೋ ಹೇಳಿದ್ದಾರೆ ಎನ್ನುವುದು ಸರಿಯಲ್ಲ. ಹೇಳಿಕೆ ನೀಡಿದ ನಂತರ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ. ಕಮಲ್ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ನೋಡಬೇಕು ಎಂದು ವಿವರಿಸಿದರು.
ಇದಕ್ಕೆ ಪೀಠ, ನನ್ನ ಪ್ರಕಾರ ಜಲ, ನೆಲ, ಭಾಷೆ ಈ ಮೂರು ವಿಚಾರಗಳು ಯಾವುದೇ ವ್ಯಕ್ತಿಗೆ ಅತ್ಯಂತ ಮುಖ್ಯ. ಈ ದೇಶ ವಿಭಜನೆಯಾಗಿದ್ದುದು ಭಾಷೆಯ ಆಧಾರದಲ್ಲಿ. ರಾಜ್ಯಗಳು ಭಾಷೆಗಳ ಮೇಲೆ ರಚನೆಯಾಗಿವೆ. ಇದು ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ ಎಂದರು. ವಿವಾದ ಸೃಷ್ಟಿಯಾದ ನಂತರ ಕಮಲ್ ಹಾಸನ್ ಬರೆದಿರುವ ಪ್ರತಿಕ್ರಿಯೆಯಲ್ಲಿ ಕ್ಷಮೆ ಕೋರಿದ್ದರೆ ಅದನ್ನು ಒಪ್ಪಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಕ್ಷಮೆ ಇಲ್ಲ. ನೀವು ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಬಹುದು. ಜನರ ಭಾವನೆಗಳನ್ನು ನೀವು ನೋಯಿಸಲಾಗದು.
ಭಾಷೆಯ ಆಧಾರದಲ್ಲಿ ಈ ದೇಶ ವಿಭಜನೆಯಾಗಿದೆ. ಸಾರ್ವಜನಿಕ ವ್ಯಕ್ತಿತ್ವವಾದ ಕಮಲ್ ಹಾಸನ್ ಅವರು ಅಂಥ ಹೇಳಿಕೆ ನೀಡಲಾಗದು. ಇದರಿಂದ ಅಶಾಂತಿ ಮತ್ತು ಕ್ಷೋಭೆ ಉಂಟಾಗಿದೆ. ರಾಜ್ಯದ ಜನರು ಕ್ಷಮೆ ಕೋರಲು ಕೇಳಿದ್ದಾರೆ ಅಷ್ಟೆ. ಅವರು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಯಾವ ಆಧಾರದ ಮೇಲೆ ಅವರು ಮಾತನಾಡುತ್ತಿದ್ದಾರೆ? 1950ರಲ್ಲಿ ರಾಜಗೋಪಾಲಚಾರಿಯವರು ಇಂಥಹದ್ದೇ ಹೇಳಿಕೆ ನೀಡಿ, ಆನಂತರ ಬಹಿರಂಗವಾಗಿ ಕ್ಷಮೆ ಕೋರಿದ್ದರು. ಈಗ ಸಿನಿಮಾ ಬಿಡುಗಡೆಗೆ ಕಮಲ್ ನಿರ್ಮಾಣ ಸಂಸ್ಥೆಯವರು ರಕ್ಷಣೆ ಕೋರುತ್ತಿದ್ದಾರೆ. ಕ್ಷಮೆ ಕೇಳಿದ್ದರೆ ಇದು ಇರುತ್ತಲೇ ಇರಲಿಲ್ಲ ಎಂದು ಪೀಠ ಎಂದಿತು.

