ಗ್ರಹಣದ ಆಚರಣೆ ಹಿನ್ನೆಲೆಯಲ್ಲಿ ರಾಯರ ಮಠದಲ್ಲಿ ತೀರ್ಥ-ಪ್ರಸಾದ ವಿತರಣೆ ಬಂದ್

ರಾಯಚೂರು: ರಾಹುಗ್ರಸ್ತ ರಕ್ತಚಂದ್ರಗ್ರಹಣ ಕಾರಣದಿಂದಾಗಿ ಇಂದು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುವ ನಿತ್ಯ ಪೂಜೆ ಮತ್ತು ಉತ್ಸವಗಳ ಕ್ರಮದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ.

ರಾಯರ ಮಠದಲ್ಲಿ ಇಂದು ಮಧ್ಯಾಹ್ನದಿಂದ ತೀರ್ಥ ಮತ್ತು ಪ್ರಸಾದ ವಿತರಣೆ ನಿಲ್ಲಿಸಲಾಗುತ್ತದೆ. ಆದರೆ ಎಂದಿನಂತೆ ಭಕ್ತರಿಗೆ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ಇರುತ್ತದೆ. ಮಧ್ಯಾಹ್ನ 12:30ಕ್ಕೆ ಎಲ್ಲಾ ಪೂಜೆಗಳು, ಉತ್ಸವಗಳು, ಸಂಸ್ಥಾನ ಪೂಜೆ ಹಾಗೂ ಪಾದ ಪೂಜೆ ಮುಗಿಯಲಿದ್ದು, ಸಾಮಾನ್ಯವಾಗಿ ರಾತ್ರಿ ನಡೆಯುವ ಸೇವೆ-ಉತ್ಸವಗಳನ್ನು ಹಗಲಿನಲ್ಲೇ ನೆರವೇರಿಸಲಾಗುವುದು.

ಪ್ರಾಂಗಣದಲ್ಲಿ ನಡೆಯುವ ವಿವಿಧ ರಥೋತ್ಸವ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಗ್ರಹಣ ಕಾಲದಲ್ಲಿ ಮಠದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಗ್ರಹಣ ಮುಕ್ತಾಯ ಬಳಿಕ ರಾಯರ ವೃಂದಾವನಕ್ಕೆ ಜಲಾಭಿಷೇಕ ಮಾಡಲಾಗುತ್ತದೆ.