ಲಕ್ನೋ: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಗೆ ಸಂಬಂಧಿಸಿ, 11 ವರ್ಷದ ಬಾಲಕಿ ಮೇಲೆ ಇಬ್ಬರು ಮಕ್ಕಳ ತಂದೆಯೊಬ್ಬನು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ದೌರ್ಜನ್ಯದಿಂದ ಗರ್ಭಿಣಿಯಾದ ಬಾಲಕಿ ಹೆರಿಗೆ ಮಾಡಿದ ಕೆಲವೇ ಕ್ಷಣಗಳಲ್ಲಿ, ಅಂದರೆ ಅರ್ಧ ಗಂಟೆಯಲ್ಲೇ ನವಜಾತ ಶಿಶು ಪ್ರಾಣ ಕಳೆದುಕೊಂಡಿದೆ.

ಆರೋಪಿ ರಶೀದ್ (31) ಅಪ್ರಾಪ್ತೆಯನ್ನು ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಸುಮಾರು ಆರು-ಏಳು ತಿಂಗಳ ಹಿಂದೆ, ಹಣ್ಣು ಕೊಡಿಸುವ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮೊದಲ ಬಾರಿಗೆ ದೌರ್ಜನ್ಯ ನಡೆಸಿದ್ದಾನೆ. ಬಳಿಕ ಈ ಘಟನೆ ಬಯಲಾಗದಂತೆ ಮಾಡಲು, “ಯಾರಿಗಾದರೂ ಹೇಳಿದರೆ ನಿನ್ನ ಕುಟುಂಬವನ್ನು ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ತನ್ನ ಕೃತ್ಯವನ್ನು ವೀಡಿಯೋಗೆ ದಾಖಲಿಸಿ, ಅದನ್ನು ಆಧಾರ ಮಾಡಿಕೊಂಡು ಹಲವು ಬಾರಿ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ಶೋಷಣೆ ಮುಂದುವರಿಸಿದ್ದಾನೆ ಎಂದು ಬಾಲಕಿಯ ಅಣ್ಣ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಬಾಲಕಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪರಿಣಾಮ ಆಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಆಕೆ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಬಳಿಕ ಆಕೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಬಾಲಕಿ ಅದೇ ದಿನ ಮಗುವಿಗೆ ಜನ್ಮ ನೀಡಿದ್ದಾಳೆ. 7 ತಿಂಗಳಲ್ಲೇ ಹೆರಿಗೆಯಾಗಿದ್ದು, ಅರ್ಧ ಗಂಟೆಯ ಬಳಿಕ ಮಗು ಮೃತಪಟ್ಟಿದೆ.
ಘಟನೆ ಸಂಬಂಧ ಎರಡು ಮಕ್ಕಳ ತಂದೆ ರಶೀದ್ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ನವಾಬ್‌ಗಂಜ್ ಠಾಣೆಯ ಅಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಶುಕ್ರವಾರ ರಶೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಅಲ್ಲದೇ ಆರೋಪಿಯೊಂದಿಗೆ ಹೊಂದಾಣಿಕೆಯಾಗಲು ಮಗುವಿನಿಂದ ಡಿಎನ್‌ಎ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.



