ಟ್ರಾಫಿಕ್ ದಂಡ ಪಾವತಿಗೆ 50% ರಿಯಾಯಿತಿ – 15 ದಿನಗಳಲ್ಲಿ 45 ಕೋಟಿ ಸಂಗ್ರಹ

ಬೆಂಗಳೂರು: ಟ್ರಾಫಿಕ್ ದಂಡ ಪಾವತಿಗೆ ಸರ್ಕಾರ ನೀಡಿದ್ದ 50% ರಿಯಾಯಿತಿಗೆ ನಗರದಲ್ಲೇ ಅಸಾಧಾರಣ ಪ್ರತಿಕ್ರಿಯೆ ಲಭಿಸಿದೆ. ಕೇವಲ 15 ದಿನಗಳೊಳಗೆ ವಾಹನ ಸವಾರರು ಭಾರಿ ಸಂಖ್ಯೆಯಲ್ಲಿ ದಂಡ ಪಾವತಿಸಿದ್ದು, ಒಟ್ಟು ಸಂಗ್ರಹವು ಈಗಾಗಲೇ 45 ಕೋಟಿ ರೂ. ಮೀರಿದೆ.

ವಾಹನ ಮಾಲೀಕರು ಒಟ್ಟು 16,21,721 ಬಾಕಿ ಪ್ರಕರಣಗಳಿಗೆ ದಂಡ ಪಾವತಿಸಿದ್ದು, ಇದುವರೆಗೆ ಸಂಗ್ರಹವಾದ ಮೊತ್ತವು 45.52 ಕೋಟಿ ರೂಪಾಯಿಗೆ ತಲುಪಿದೆ.

ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿದ್ದರು. ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ 50% ಮೊತ್ತವನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು.