ಬೆಂಗಳೂರು, ಸೆಪ್ಟೆಂಬರ್ 4: ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮರದ ಹಲಗೆಗಳನ್ನು ಹೊತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ನಡೆದಿದೆ. ಸದ್ಯ ವಾಹನ ಸಂಚಾರ ಕಡಿಮೆ ಇದ್ದ ಕಾರಣ ಭಾರಿ ದುರಂತ ತಪ್ಪಿತು.

ಶಾಂತಿ ಟಿಂಬರ್ ಟ್ರೇಡಿಂಗ್ ಕಂಪನಿಗೆ ಸರಕು ಸಾಗಿಸುತ್ತಿದ್ದ ಲಾರಿ ರಿವರ್ಸ್ ಮಾಡುವ ವೇಳೆ ಪಲ್ಟಿಯಾದುದಾಗಿ ತಿಳಿದುಬಂದಿದೆ. ಈ ಘಟನೆ ಪರಿಣಾಮ ದೀಪಾಂಜಲಿ ನಗರದಿಂದ ಸ್ಯಾಟಲೈಟ್ ಕಡೆ ಬರುವ ರಸ್ತೆಯಲ್ಲಿ ಮಧ್ಯರಾತ್ರಿ ತೀವ್ರ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.
