ನವದೆಹಲಿ:
ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಸಂಪೂರ್ಣ ಪರಿಷ್ಕರಣೆಗೆ ಅನುಮೋದನೆ ನೀಡಿದ ತಕ್ಷಣವೇ ಷೇರು ಮಾರುಕಟ್ಟೆ ಚುರುಕು ತೋರಿದೆ.

ಗುರುವಾರ ಬೆಳಗ್ಗೆ 9:20ರ ವೇಳೆಗೆ ಸೆನ್ಸೆಕ್ಸ್ 576.63 ಪಾಯಿಂಟ್ ಏರಿಕೆಯಿಂದ 81,144.34 ಕ್ಕೆ ತಲುಪಿತು. ನಿಫ್ಟಿ ಕೂಡ 156.65 ಪಾಯಿಂಟ್ ಏರಿಕೆಯೊಂದಿಗೆ 24,871.70 ಮಟ್ಟದಲ್ಲಿ ವಹಿವಾಟು ನಡೆಸಿತು.
ಬುಧವಾರ ಸಂಜೆ,ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2017ರಲ್ಲಿ ಜಾರಿಗೆ ಬಂದಿದ್ದ ಜಿಎಸ್‌ಟಿ ವ್ಯವಸ್ಥೆಯ ಸಂಪೂರ್ಣ ಪರಿಷ್ಕರಣೆಯನ್ನು ಘೋಷಿಸಿದರು. ಈ ತಿದ್ದುಪಡಿ ಕ್ರಮದಿಂದ ಗೃಹೋಪಯೋಗಿ ವಸ್ತುಗಳು, ಔಷಧಿಗಳು, ಸಣ್ಣ ಕಾರುಗಳು ಮತ್ತು ವಿವಿಧ ಉಪಕರಣಗಳ ಮೇಲಿನ ಸುಂಕ ಕಡಿತಗೊಂಡಿದೆ.ಟೂತ್‌ಪೇಸ್ಟ್, ವಿಮೆ, ಟ್ರ್ಯಾಕ್ಟರ್‌ಗಳಿಂದ ಹಿಡಿದು ಸಿಮೆಂಟ್‌ವರೆಗೆ ಹಲವು ವಸ್ತುಗಳ ಬೆಲೆಗಳಲ್ಲಿ ಬದಲಾವಣೆ ಕಾಣಲಿವೆ.
ಜಿಎಸ್‌ಟಿ ಪರಿಷ್ಕರಣೆ:
ಹಿಂದಿನ ನಾಲ್ಕು ಸ್ಲ್ಯಾಬ್‌ಗಳ ಬದಲು 5% ಮತ್ತು 18% ಸ್ಲ್ಯಾಬ್‌ಗಳನ್ನು ಜಾರಿಗೆ ತರುವ ಕುರಿತು ಸರ್ವಾನುಮತ ಒಪ್ಪಿಗೆ ದೊರಕಿದೆ. ಐಷಾರಾಮಿ ವಸ್ತುಗಳಿಗಾಗಿ 40% ಜಿಎಸ್‌ಟಿ ಸ್ಲ್ಯಾಬ್ ಅನ್ವಯವಾಗಲಿದೆ.

ಆದರೆ ದುಬಾರಿ ಕಾರುಗಳು, ತಂಬಾಕು ಮತ್ತು ಸಿಗರೇಟ್‌ಗಳಂತಹ ಆಯ್ದ ವಸ್ತುಗಳಿಗೆ ವಿಶೇಷ 40% ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.
ಹೊಸ ಜಿಎಸ್‌ಟಿ ದರಗಳು:
ಪಾನ್ ಮಸಾಲ, ಗುಟ್ಕಾ, ಸಿಗರೇಟ್, ಜಗಿಯುವ ತಂಬಾಕು ಉತ್ಪನ್ನಗಳು (ಜರ್ದಾ, ಸಂಸ್ಕರಿಸದ ತಂಬಾಕು ಮತ್ತು ಬೀಡಿ) ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಪರಿಷ್ಕೃತ ಜಿಎಸ್‌ಟಿ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ.
