ಉಡುಪಿ/ಮಂಗಳೂರು; ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಶಿಶು ಮಾರಾಟ ಮಾಡಿದ ಆರೋಪದಲ್ಲಿ ವೈದ್ಯ ಸೇರಿ ಮೂವರು ಪೊಲೀಸರ ಬಲೆಗೆ ಸಿಕ್ಕಿದ್ದಾರೆ.ಮಂಗಳೂರು ಮೂಲದ ವೈದ್ಯರ ಜೊತೆಗೆ ಮಧ್ಯವರ್ತಿ ವಿಜಯಲಕ್ಷ್ಮಿ ಮತ್ತು ಅತ್ಯಾಚಾರ ಆರೋಪಿ ನವನೀತ್ ನಾರಾಯಣ ಬಂಧಿತರಾಗಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಶಿರ್ವ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ಪೋಷಣ್ ಟ್ರ್ಯಾಕರ್ ರಿಜಿಸ್ಟರ್ ವೇಳೆ ಮಗು ದಂಪತಿಗಳದ್ದಲ್ಲ ಎಂಬುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಶಿರ್ವ ಠಾಣೆ ಪೊಲೀಸರು ತನಿಖೆ ನಡೆಸಿ ಶಿಶು ಮಾರಾಟ ಜಾಲವನ್ನು ಬಯಲಿಗೆಳೆದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ನವನೀತ್ ನಾರಾಯಣ ಎಂಬಾತ ಮಾನಸಿಕ ಅಸ್ವಸ್ಥೆಯಾದ ಯುವತಿಗೆ ಅತ್ಯಾಚಾರ ಎಸಗಿದ್ದು, ಆಕೆಗೆ ಮಗುವಾದ ಬಳಿಕ ಉಡುಪಿ ಮೂಲದ ದಂಪತಿಗಳು ಆಸ್ಪತ್ರೆಯಿಂದಲೇ ಶಿಶುವನ್ನು ಖರೀದಿಸಿದ್ದಾರೆ. ಮಧ್ಯವರ್ತಿ ವಿಜಯಲಕ್ಷ್ಮಿ ಮೂಲಕ 4 ಲಕ್ಷ ರೂಪಾಯಿ ಪಾವತಿಸಲಾಗಿದ್ದು, ಈ ದಂಧೆಯಲ್ಲಿ ವೈದ್ಯ ಡಾ. ಸೋಮೇಶ್ ಸೋಲೋಮನ್ ಅವರೂ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಮೂವರನ್ನು ಬಂಧಿಸಿರುವ ಪೊಲೀಸರು, ಶಿಶುವನ್ನು ಖರೀದಿಸಿದ ದಂಪತಿಗಳ ವಿಚಾರಣೆ ಮುಂದುವರಿಸಿದ್ದಾರೆ.
