ಶಿರಸಿ: ಅಭಿಮಾನ ಶೂನ್ಯ ರಾಜಕಾರಣಿಗಳಿಂದ ಕನ್ನಡ ಭಾಷೆಗೆ ಅನ್ಯಾಯವಾಗುತ್ತಿದೆ. ಪ್ರಾದೇಶಿಕ ಭಾಷೆ ಉಳಿವಿನ ಅಗತ್ಯದ ಬಗ್ಗೆ ಮನವರಿಕೆ ಮಾಡಬೇಕಿದೆ ಎಂದು ಕದಂಬ ಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡಿಗರ ಮೇಲೆ ಪರಭಾಷಿಕರು ನಿರಂತರವಾಗಿ ದೌರ್ಜನ್ಯ ಪುಂಡಾಟಿಕೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರಾಜ್ಯಾದ್ಯಂತ ಕನ್ನಡಿಗರನ್ನು ಜಾಗೃತಗೊಳಿಸಲು ಕನ್ನಡಿಗರ ಶಂಖನಾದ ದಕ್ಷಿಣ ಪಥೇಶ್ವರ, ಇಮ್ಮಡಿ ಪುಲಕೇಶಿ ದಿಗ್ವಿಜಯಯಾತ್ರೆಯನ್ನು ಸೆಪ್ಟೆಂಬರ್ 30 ರಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಚಕ್ರವರ್ತಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಚಾಲುಕ್ಯ ರಾಜಧಾನಿ ಬಾದಾಮಿ ಹಾಗೂ ವಿಧಾನಸೌಧದ ಮುಂದೆ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು. ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದು. ಮಯೂರವರ್ಮನ ಪ್ರತಿಮೆ ಬನವಾಸಿಯಲ್ಲಿ ಸ್ಥಾಪಿಸಲು ಒತ್ತಾಯಿಸಲಾಗುವದು ಎಂದರು.
ಒಕ್ಕೂಟ ವ್ಯವಸ್ಥೆಯಲ್ಲಿ ಬಹುಶಃ ಕರ್ನಾಟಕ್ಕೆ ಆಗಿರುವ ಅನ್ಯಾಯ ಯಾವ ರಾಜ್ಯಕ್ಕೂ ಆಗಲಿಲ್ಲ. ಕೇಂದ್ರ ಸರ್ಕಾರಗಳು ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಲೇ ಬರುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಎದೆಗಾರಿಕೆ ಯಾವ ಪಕ್ಷಗಳಿಗೂ ಇಲ್ಲ ಎಂದು ಆರೋಪಿಸಿದರು.
ಬನವಾಸಿ ಹೋಬಳಿ ಸಂಚಾಲಕ ಗುತ್ಯಪ್ಪ ಮಾದರ್, ರಾಜ್ಯ ಸಮಿತಿ ಸದಸ್ಯ ನಾ.ಮಹದೇವಸ್ವಾಮಿ, ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಇದ್ದರು.