ವಿದ್ಯಾಸಂಜೀವಿನಿ, ಭೋಜನಾಲಯ ಮತ್ತು ಉಪಹಾರ ಗೃಹ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

ಹೊನ್ನಾವರ ಜು.28 : ನಾನು ಯಾವ ವಿದ್ಯಾಸಂಸ್ಥೆಗೂ ತೊಂದರೆ ಕೊಟ್ಟಿಲ್ಲ. ಯಾರ ಹತ್ತಿರವು ವಸೂಲಿ ಮಾಡುವುದಿಲ್ಲ. ಕೆಟ್ಟ ಕೆಲಸಕ್ಕೆ ರಾಜಿ ಇಲ್ಲ. ನಾನು ಮಾತನಾಡುವವನಲ್ಲ ಕೆಲಸ ಮಾಡುವವನು. ನಾನು ಸನ್ಮಾನಕ್ಕೆ ಒಪ್ಪುವುದಿಲ್ಲ. ಮೂರು ಬಾರಿ ಪುಕ್ಕಟೆ ಓಟು ಕೊಟ್ಟು ಆರಿಸಿದ್ದೀರಿ. ಕ್ಷೇತ್ರದಲ್ಲಿ ಶಿಕ್ಷಣದ ಬಗ್ಗೆ, ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದೇನೆ ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಪಟ್ಟಣದ ಎಸ್. ಡಿ. ಎಂ. ಕಾಲೇಜಿನಲ್ಲಿ ವಿದ್ಯಾಸಂಜೀವಿನಿ, ಭೋಜನಾಲಯ ಮತ್ತು ಉಪಹಾರ ಗೃಹ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಯಾವ ಕಾಲೇಜಿನಲ್ಲಿಯೂ ಇಂತಹ ಭೋಜನಾಲಯ ಇಲ್ಲ. ಇಷ್ಟೊಂದು ಅಚ್ಚು ಕಟ್ಟಾದ ವಿದ್ಯಾಸಂಸ್ಥೆ ಇಲ್ಲ. ಹಸಿದವರಿಗೆ ಕಡಿಮೆ ಬೆಲೆಯಲ್ಲಿ ಊಟ ಕೊಡುತ್ತಾರೆ. ಕೇವಲ ಮೊವತ್ತು ರೂಪಾಯಿಗೆ ಊಟ ಕೊಡುತ್ತಿದ್ದಾರೆ. ಅದು ಯಾವಾಗಲು ಅಷ್ಟೇ ಬೆಲೆಗೆ ಇರಲಿ, ಏರಿಕೆ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.

ಮಾಜಿ ಶಾಸಕ ಡಾ. ಎಂ. ಪಿ. ಕರ್ಕಿ ಯವರು ಶಿಸ್ತಿನ ಮನುಷ್ಯರು, ನಿಶ್ವರ್ತವಾಗಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಜಿಲ್ಲೆಯ ಹೊರಗೆ ಲಕ್ಷ ಲಕ್ಷ ಕೊಟ್ಟು ಸರ್ಟಿಫಿಕೇಟ್ ತರಬೇಕು. ಇಲ್ಲಿ ಕಡಿಮೆ ಮೊತ್ತದಲ್ಲಿ ಶಿಕ್ಷಣ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಒಳ್ಳೆಯವರು ಇದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡಬೇಡಿ. ಮೊಬೈಲ್ ಬಳಕೆ ಎಷ್ಟು ಒಳ್ಳೆಯದು ಅದರ ಹತ್ತು ಪಟ್ಟು ಕೆಟ್ಟದು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ. ಸಮೂಹ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿ ಈ ಹಿಂದೆ ಕ್ಯಾಂಟೀನ್ ನಲ್ಲಿ ಜಾಗ ಸಾಲದೆ ವಿದ್ಯಾರ್ಥಿಗಳು ಹೊರಗಡೆ ಜಂಕ್ ಫುಡ್ ತಿನ್ನುತ್ತಿದ್ದರು. ದಾನಿಗಳ ಪೂರ್ವ ವಿದ್ಯಾರ್ಥಿಗಳ ಸಹಾಯದಿಂದ ಸುಸಜ್ಜಿತವಾದ ಭೋಜನಾಲಯ ನಿರ್ಮಾಣ ಮಾಡಿದ್ದೇವೆ ಎಂದರು.

ವಿದ್ಯಾಸಂಜೀವಿನಿ, ಭೋಜನಾಲಯ ಕಮರ್ಷಿಯಲ ಆಗದೆ ಇರುವಹಾಗೆ ನೋಡಿಕೊಳ್ಳುತ್ತೇವೆ. ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರು, ಸಿಬ್ಬಂದಿಗಳಿಗೂ ಕಡಿಮೆ ಬೆಲೆಯಲ್ಲಿ ಊಟ ಸಿಗುತ್ತದೆ. ರಾಸಾಯನಿಕ ಬಳಸದೆ ಆರೋಗ್ಯ puraka ಆಹಾರ ತಯಾರಿ ಮಾಡಲಾಗುತ್ತದೆ. ಸಂಸ್ಥೆಯಲ್ಲಿ ರಾಜಕೀಯ ಬಂದರೆ ಕಷ್ಟವಾಗುತ್ತಿತ್ತು. ಎರಡು ಕ್ಷೇತ್ರದ ಶಾಸಕರು ನಮ್ಮ ಸಂಸ್ಥೆಯಲ್ಲಿ ಅದಕ್ಕೆ ಅವಕಾಶ ಮಾಡಿ ಕೊಟ್ಟಿಲ್ಲ ಎಂದರು.

ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿದ್ಯಾ ಸಂಜೀವಿನಿ ಶಿಷ್ಯವೇತನಕ್ಕೆ ಚಾಲನೆ ನೀಡಲಾಯಿತು. ಶಾಸಕರನ್ನು, ದಾನಿಗಳನ್ನು ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಪ. ಪಂ. ಅಧ್ಯಕ್ಷ ವಿಜಯ ಕಾಮತ್, ಸಂಸ್ಥೆಯ ಉಪಾಧ್ಯಕ್ಷ ನಾಗರಾಜ ಕಾಮತ, ಹರಿದಾಸ ಅರವಾರೆ ಇದ್ದರು.
ಸಂಸ್ಥೆಯ ಕಾರ್ಯದರ್ಶಿ ಎಸ್. ಎಂ. ಭಟ್ಟ ಸ್ವಾಗತಿಸಿದರು. ಜಿ. ಪಿ. ಹೆಗಡೆ ವಂದನಾರ್ಪಣೆ ಮಾಡಿದರು. ಉಪನ್ಯಾಸಕ ವಿನಾಯಕ ಭಟ್ಟ ಕಾರ್ಯಕ್ರಮ ನಿರೂಪಣೆ ಮಾಡಿದರು.